ಶಿಕ್ಷಣ ಸಾಲ ಎಲ್ಲೆಲ್ಲಿ ಹೇಗೆ?

ಶೈಕ್ಷಣಿಕ ಕ್ಷೇತ್ರದಲ್ಲಿ ಅಗಾಧ ಬದಲಾವಣೆಗಳಾಗಿವೆ. ಸರ್ವರಿಗೂ ಶಿಕ್ಷಣ ದೊರೆಯಬೇಕೆಂಬ ಕಾರಣಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಹೀಗಿದ್ದೂ ಎಲ್ಲರಿಗೂ ಶಿಕ್ಷಣ ಲಭ್ಯವಾಗುತ್ತಿಲ್ಲ. ಉನ್ನತ ಶಿಕ್ಷಣವಂತೂ ಅನೇಕರಿಗೆ ಮರೀಚಿಕೆಯಂತಾಗಿಬಿಟ್ಟಿದೆ. ಆದರೆ ಶಿಕ್ಷಣ ಸಾಲದ ಮೂಲಕ ಅವನ್ನೂ ಪಡೆಯಲು ಸಾಧ್ಯ. ಹಾಗಿದ್ದರೆ ಶಿಕ್ಷಣ ಸಾಲ ಹೇಗೆ, ಎತ್ತ? ವಿವರ ಇಲ್ಲಿದೆ.

ದೇವರಾಜ್ ಎಲ್., ಬೆಂಗಳೂರು
ಪಿಯುಸಿಯಲ್ಲಿ ಒಳ್ಳೆ ಮಾರ್ಕ್ಸ್ ತಗೊಂಡಿರುವ ಮಗನನ್ನು ಮೆಡಿಕಲ್​ಗೆ ಕಳುಹಿಸುವ ಯೋಚನೆ ತಂದೆಯದ್ದು. ಆದರೆ ಸಣ್ಣ ಜಮೀನು ಇರುವ ಅಪ್ಪನಿಗೆ ಅಷ್ಟೊಂದು ಶುಲ್ಕ ಭರಿಸುವ ತಾಕತ್ತು ಖಂಡಿತ ಇಲ್ಲ. ಆದರೆ ಮೆಡಿಕಲ್​ನ ಸೆಳೆತವೂ ಬಿಡುತ್ತಿಲ್ಲ. ಆ ಸಮಯದಲ್ಲಿ ಅವರ ನೆರವಿಗೆ ಬಂದದ್ದು ಶಿಕ್ಷಣ ಸಾಲ. ಮಗ ಈಗ ಮೆಡಿಕಲ್ ಮುಗಿಸಿ ವೈದ್ಯನಾಗಿದ್ದಾನೆ. ಸಾಲವನ್ನೂ ತೀರಿಸಿದ್ದಾನೆ. ನಿಜ, ಮೊದಲೆಲ್ಲ ಉನ್ನತ ಶಿಕ್ಷಣ ಪಡೆಯುವುದೆಂದರೆ ದುಡ್ಡಿರುವವರಿಗೆ ಮಾತ್ರ ಎಂಬಂತಾಗಿತ್ತು. ಆದರೆ ಈಗ ಶಿಕ್ಷಣ ಸಾಲ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೊರೆಯುವ ಸ್ಕಾಲರ್​ಶಿಪ್​ಗಳಿಂದಾಗಿ ಇಂದು ಉನ್ನತ ಶಿಕ್ಷಣ ಪಡೆಯುವುದು ದೊಡ್ಡ ವಿಷಯವಲ್ಲ. ಆದರೆ ಈ ಶಿಕ್ಷಣ ಸಾಲ ಎಲ್ಲಿ ಸಿಗುತ್ತದೆ, ಹೇಗೆ ಅದನ್ನು ಪಡೆಯುವುದು ಎಂಬುದು ಇಂದಿಗೂ ಅನೇಕರಿಗೆ ಗೊತ್ತಿಲ್ಲ. ಈ ಗೊಂದಲಗಳಿಂದಾಗಿಯೇ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಹೋಗುತ್ತಿಲ್ಲ. ನಿಜ. ಶಿಕ್ಷಣವೂ ಉದ್ಯಮವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಬಡ ಹಾಗೂ ಮಧ್ಯಮವರ್ಗದ ಮಕ್ಕಳಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗುತ್ತಿದೆ. ಈ ಕಾರಣಕ್ಕಾಗಿಯೇ ಅದೆಷ್ಟೋ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧದಲ್ಲೇ ಬಿಡುವುದೂ ಉಂಟು. ಇದು ಪ್ರತಿಭಾವಂತ ಮಕ್ಕಳಿಗೂ ಅನ್ವಯಿಸುತ್ತಿದೆ. ರಾಜ್ಯದಲ್ಲಿ 24 ಸರ್ಕಾರದ ವಿಶ್ವವಿದ್ಯಾಲಯಗಳು, 16 ಡೀಮ್್ಡ ವಿಶ್ವವಿದ್ಯಾಲಯಗಳು, 10 ಖಾಸಗಿ ಮತ್ತು 1 ಕೇಂದ್ರ ವಿ.ವಿಗಳಿವೆ. ಅಲ್ಲದೆ, 3360 ಪದವಿ ಕಾಲೇಜುಗಳಿವೆ. ಇಷ್ಟೆಲ್ಲ ವಿವಿಗಳು ಹಾಗೂ ಕಾಲೇಜುಗಳಿದ್ದರೂ ಪ್ರತಿ ವರ್ಷ ಕಾಲೇಜಿನಿಂದ ಹೊರಗುಳಿಯುವ ಮಕ್ಕಳೇ ಹೆಚ್ಚು. ರಾಜ್ಯದಲ್ಲಿ ಇಂದಿಗೂ ಎಸ್ಸ್ಸೆಸ್ಸೆಲ್ಸಿಯಿಂದ ಉತ್ತೀರ್ಣರಾಗಿ ಪಿಯು ಅಥವಾ ಡಿಪ್ಲೊಮಾಗೆ ಪ್ರವೇಶ ಪಡೆಯಬೇಕಾದ ವಿದ್ಯಾರ್ಥಿಗಳ ಪೈಕಿ 10 ಸಾವಿರ ವಿದ್ಯಾರ್ಥಿಗಳು ಪ್ರತಿ ವರ್ಷ ಡ್ರಾಪ್​ಔಟ್ ಆಗುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಇಂದು ಆರ್ಥಿಕ ಪರಿಸ್ಥಿತಿಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು ‘ಶೈಕ್ಷಣಿಕ ಸಾಲ’ ಪಡೆದು ಉನ್ನತ ಶಿಕ್ಷಣ ಪಡೆಯಬಹುದು. ನಂತರ ಉದ್ಯೋಗ ಪಡೆದು ಸಾಲವನ್ನು ಮರುಪಾವತಿ ಮಾಡುತ್ತೇನೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿದ್ದರೆ ಬ್ಯಾಂಕ್​ಗಳು ನೀಡುವ ಶೈಕ್ಷಣಿಕ ಸಾಲದ ಉಪಯೋಗ ಪಡೆದುಕೊಳ್ಳಬಹುದು.

ಈ ಹಿಂದೆ ಶೈಕ್ಷಣಿಕ ಸಾಲ ಎಂದರೆ ವೃತ್ತಿಪರ ಕೋರ್ಸ್​ಗಳಿಗೆ ಮಾತ್ರ ಸೀಮಿತವಾಗಿತ್ತು. ಕಾರಣ ಇಷ್ಟೇ, ವೃತ್ತಿಪರ ಕೋರ್ಸ್ ಮುಗಿಸಿದ ಬಳಿಕ ಸುಲಭವಾಗಿ ಉದ್ಯೋಗ ದೊರೆಯುತ್ತದೆ. ಕೋರ್ಸ್ ಮುಗಿಸಿದ ಒಂದೆರೆಡು ವರ್ಷಗಳಲ್ಲಿ ಸಾಲ ಮರುಪಾವತಿಯಾಗುತ್ತದೆ ಎಂಬ ಉದ್ದೇಶದಿಂದ ಬ್ಯಾಂಕ್​ಗಳು ಸಾಲ ನೀಡುತ್ತಿದ್ದವು.

ಇದೀಗ ಬ್ಯಾಂಕ್​ಗಳು ತಮ್ಮ ನಿಯಮವನ್ನು ಸಡಿಲಗೊಳಿಸಿವೆ. ವೃತ್ತಿಪರ ಕೋರ್ಸ್​ಗಳ ಹೊರತಾಗಿಯೂ ಇರುವ ಪದವಿ ಕೋರ್ಸ್​ಗಳಿಗೆ ಸಾಲ ನೀಡಲು ಮುಂದಾಗಿವೆ. ಪಿಯು ನಂತರ ಬಿಎಸ್ಸಿ, ಬಿ.ಕಾಂ, ಬಿ.ಎ, ಸ್ನಾತಕೋತ್ತರ ಪದವಿಗೆ ಸೇರ ಬಯಸುವ ವಿದ್ಯಾರ್ಥಿಗಳು ಕೂಡ ಶೈಕ್ಷಣಿಕ ಸಾಲವನ್ನು ಪಡೆಯಬಹುದು. ಸಾಮಾನ್ಯ ಸಹಕಾರಿ ಬ್ಯಾಂಕ್​ನಿಂದ ಹಿಡಿದು, ರಾಷ್ಟ್ರೀಕೃತ ಬ್ಯಾಂಕ್​ಗಳು ಕೂಡ ಶೈಕ್ಷಣಿಕ ಸಾಲವನ್ನು ನೀಡುತ್ತವೆ.

ಶೈಕ್ಷಣಿಕ ಸಾಲ ಪಡೆಯುವುದು ಹೇಗೆ?

ಸಾಕಷ್ಟು ಬ್ಯಾಂಕ್​ಗಳು ವಿದ್ಯಾನಿಧಿ, ವಿದ್ಯಾಜ್ಯೋತಿ ಸೇರಿದಂತೆ ವಿವಿಧ ಹೆಸರಿನಲ್ಲಿ ಸಾಲ ನೀಡುತ್ತಿವೆ. ಇದನ್ನು ಪಡೆದುಕೊಳ್ಳಲು ಅಗತ್ಯ ದಾಖಲೆಗಳನ್ನು ನೀಡಬೇಕು. ಕನಿಷ್ಠ 30 ಸಾವಿರದಿಂದ ಗರಿಷ್ಠ 30 ಲಕ್ಷದವರೆಗೂ ವಿದ್ಯಾರ್ಥಿ ಸಾಲ ದೊರೆಯುತ್ತದೆ. ಹೆಚ್ಚಿನ ಸಾಲ ಪಡೆಯುವುದಾದರೆ ಹೆಚ್ಚಿನ ಭದ್ರತಾ ದಾಖಲೆಗಳನ್ನು ನೀಡಬೇಕಾಗುತ್ತದೆ. ಕೋರ್ಸ್​ನ ಮಹತ್ವ ಹಾಗೂ ಅವಧಿಯ ಮೇಲೆ ಇದು ಬಿಂಬಿತವಾಗಿರುತ್ತದೆ. ಕೆಲವು ಬ್ಯಾಂಕ್​ಗಳು ಕೇವಲ ಬೋಧನಾ ಶುಲ್ಕವನ್ನು ನೀಡಿದರೆ ಮತ್ತೆ ಕೆಲವು ಬೋಧಕೇತರ ಶುಲ್ಕದ ವೆಚ್ಚವನ್ನು ಭರಿಸುತ್ತವೆ. ಸಾರ್ವಜನಿಕ ವಲಯದ ಬ್ಯಾಂಕ್​ಗಳು ಶೇ.9.70 ರಿಂದ ವಾರ್ಷಿಕ ಶೇ.13ರಷ್ಟು ಬಡ್ಡಿ ವಿಧಿಸುತ್ತವೆ. ಖಾಸಗಿ ವಲಯದ ಬ್ಯಾಂಕ್​ಗಳು ಶೇ.11ರಿಂದ ಶೇ.15ರವರೆಗೆ ಬಡ್ಡಿ ವಿಧಿಸುತ್ತವೆ. ಈ ಬಡ್ಡಿದರವನ್ನು ಬ್ಯಾಂಕ್​ಗಳು ವ್ಯಾಸಂಗ ಮುಗಿದ ದಿನದಿಂದ ಪಾವತಿಸುವವರೆಗಿನ ದಿನದವರೆಗೆ ಲೆಕ್ಕ ಹಾಕಲಾಗುತ್ತದೆ.

ಯಾವ ಕೋರ್ಸ್​ಗಳಿಗೆ ಲಭ್ಯ?: ಈ ಕೋರ್ಸ್​ಗಳಿಗೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ(ಯುಜಿಸಿ), ಸರ್ಕಾರಿ, ಎಐಸಿಟಿಇ ಅನುಮೋದನೆ ಪಡೆದಿರಬೇಕು. ಇಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತವೈದ್ಯಕೀಯ, ಬಿಎ, ಎಂ.ಎ, ಬಿ.ಕಾಂ, ಏವಿಯೇಷನ್ ಸೇರಿದಂತೆ ಸಾಕಷ್ಟು ಕೋರ್ಸ್​ಗಳಿಗೆ ಸಾಲ ದೊರೆಯುತ್ತದೆ. ವಿದ್ಯಾರ್ಥಿಗಳು ತಮ್ಮ ಹತ್ತಿರದ ಬ್ಯಾಂಕ್​ಗೆ ಭೇಟಿ ನೀಡಿ ಸಾಲದ ಯೋಜನೆ ಕುರಿತು ಮಾಹಿತಿಯನ್ನು ಪಡೆಯಬಹುದಾಗಿದೆ.

ಭಾರತದಲ್ಲಿ UGC/ Govt./ AICTE/ AIBMS/ ICMR ಮುಂತಾದವುಗಳಿಂದ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಅಭ್ಯಾಸಮಾಡುವ ಪದವಿ/ಸ್ನಾತಕೋತ್ತರ ಪದವಿಗಳಿಗೆ, ICWA, CA, CFA ಮುಂತಾದ ಕೋರ್ಸಗಳಿಗೆ,  IIMs, IITs, IISc, XLRI. NIFT,NID ಈ ಮುಂತಾದವುಗಳಿಂದ ನಡೆಸಲ್ಪಡುವ ಕೋರ್ಸಗಳಿಗೆ, ಡೈರೆಕ್ಟರ್ ಜನೆರಲ್ ಆಫ್ ಸಿವಿಲ್ ಏವಿಯೇಷನ್/ಸಿಪ್ಪಿಂಗ್/ಇಂಡಿಯನ್ ನರ್ಸಿಂಗ್ ಕೌನ್ಸಿಲ್/ಹಾಗೂ ಇತರೆ ರೆಗ್ಯುಲೇಟರಿಗಳಿಂದ ಮಾನ್ಯತೆ ಹೊಂದಿರುವ ಏರೋನಾಟಿಕಲ್, ಪೈಲಟ್ ಟ್ರೆ್ತ್ರನಿಂಗ್, ಸಿಪ್ಪಿಂಗ್, ನರ್ಸಿಂಗ್ ಪದವಿ ಅಥವಾ ನರ್ಸಿಂಗ್ ಡಿಪ್ಲೊಮೊ ಮುಂತಾದ ಕೋರ್ಸಗಳಿಗೆ, ವಿದೇಶಿ ಯುನಿವರ್ಸಿಟಿಗಳು ಭಾರತದಲ್ಲಿ ನಡೆಸುತ್ತಿರುವ ಇನ್ನಿತರ ಕೋರ್ಸಗಳಿಗೆ ಕೂಡ ವಿದ್ಯಾಭ್ಯಾಸ ಸಾಲ ಪಡೆಯಬಹುದು.

ಹೆಚ್ಚಿನ ಮಾಹಿತಿಗೆ ನೋಡಿ:www.ugc.ac.in
<http://www.ugc.ac.in/,&nbsp; http://www.education.nic.in <http://www.education.nic.in/, http://www.aicte.org.in <http://www.aicte.org.in/

ವಿದೇಶದಲ್ಲಿ ಸಾಲ: ನೌಕರಿಗೆ ಸಂಬಂಧಿಸಿದ ಪದವಿ ಕೋರ್ಸಗಳಿಗೆ,MCA, MBA, MS ಮುಂತಾದ ಸ್ನಾತಕೋತ್ತರ ಕೋರ್ಸಗಳಿಗೆ, CIMA- London, CPA in USA   ಮುಂತಾದವರಿಂದ ನಡೆಸಲ್ಪಡುತ್ತಿರುವ ಕೋರ್ಸಗಳಿಗೆ ಸಾಲಸೌಲಭ್ಯ ದೊರೆಯುತ್ತದೆ. ಹೆಚ್ಚಿನ ಮಾಹಿತಿಗೆ ನೋಡಿ: http://www.webometrics.info

ಕಾಲೇಜಿನ ಶುಲ್ಕ (ಮ್ಯಾನೇಜ್​ವೆುಂಟ್ ಕೋಟಾದಲ್ಲಿನ ವಿದ್ಯಾರ್ಥಿಗಳಿಗೆ ಸರ್ಕಾರ ಅನುಮೋದಿಸಿರುವ ಶುಲ್ಕದ ವೆಚ್ಚವನ್ನು ಮಾತ್ರ ಪರಿಗಣಿಸಲಾಗುತ್ತದೆ), ಹಾಸ್ಟೆಲ್ ವೆಚ್ಚ (ಕಾಲೇಜಿನ ಹಾಸ್ಟೆಲ್ ಬದಲಿಗೆ ಹೊರಗೆ ಬೇರೆ ವ್ಯವಸ್ಥೆಯಲ್ಲಿ ವಾಸಿಸುವ ವಿದ್ಯಾರ್ಥಿಗಳ ಸಾಮಾನ್ಯ ವೆಚ್ಚವನ್ನು ಪರಿಗಣಿಸಬಹುದು), ಪರೀಕ್ಷಾ ಶುಲ್ಕ/ಲೈಬ್ರರಿ ಶುಲ್ಕ/ಲ್ಯಾಬೋರೇಟರಿ ಶುಲ್ಕ. ವಿದೇಶದಲ್ಲಿ ಓದುವುದಾದರೆ ಆಗಬಹುದಾದ ಪ್ರಯಾಣ ವೆಚ್ಚ, ವಿಮೆಯ ಪ್ರೀಮಿಯಂ ವೆಚ್ಚ, ಕಾಷನ್ ಡೆಪಾಜಿಟ್/ಬಿಲ್ಡಿಂಗ್ ಫಂಡ್ (ಇದು ಕೋರ್ಸಿನಲ್ಲಿ ನೀಡುವ ಟ್ಯೂಷನ್ ಶುಲ್ಕದ ಶೇ. 10 ಮೀರುವಂತಿಲ್ಲ), ಪುಸ್ತಕ ಖರೀದಿ, ಇತರ ಸಲಕರಣೆಗಳು, ಕಂಪ್ಯೂಟರ್ ಖರೀದಿ, ಯೂನಿಫಾರಂ, ಅಧ್ಯಯನ ಪ್ರವಾಸಗಳು, ಪ್ರಾಜೆಕ್ಟ್ ವರ್ಕಗಳ ವೆಚ್ಚಗಳು (ಈ ವೆಚ್ಚಗಳು ಕೋರ್ಸಿನಲ್ಲಿ ನೀಡುವ ಟ್ಯೂಷನ್ ಶುಲ್ಕದ ಶೇ. 20 ಮೀರುವಂತಿಲ್ಲ).

ರಾಷ್ಟ್ರೀಯ ಅಂಗವಿಕಲ ಹಣಕಾಸು ಮತ್ತು ಅಭಿವೃದ್ಧಿ ನಿಗಮವು ಅಂಗವಿಕಲ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಮತ್ತು ಶಿಕ್ಷಣ ಸಾಲದಂತಹ ಹಲವು ಯೋಜನೆಗಳನ್ನು ರೂಪಿಸಿದೆ. ದೇಶದೊಳಗೆ ಅಥವಾ ವಿದೇಶದಲ್ಲಿ ಶಿಕ್ಷಣ ಪಡೆಯುವ ಅಂಗವಿಕಲ ವಿದ್ಯಾರ್ಥಿಗಳಿಗೆ ಶೇ. 4ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ವಿದೇಶದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ರೂ. 20 ಲಕ್ಷದವರೆಗೆ ಹಾಗೂ ದೇಶದೊಳಗೆ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ರೂ. 10 ಲಕ್ಷದವರೆಗೆ ಸಾಲ ನೀಡಲಾಗುವುದು.

ಸಬ್ಸಿಡಿ ಕೂಡ ಉಂಟು

ಶೈಕ್ಷಣಿಕ ಸಾಲ ಪಡೆಯುವವರು ಪಡೆದ ಹಣ ಹಾಗೂ ಅದಕ್ಕೆ ಬ್ಯಾಂಕ್ ವಿಧಿಸುವ ಬಡ್ಡಿ ಎಲ್ಲವನ್ನು ಪಾವತಿಸಬೇಕು ಎಂದು ಭಯ ಪಡಬೇಕಾಗಿಲ್ಲ. ಕಾರಣ ಆರ್ಥಿಕವಾಗಿ ಹಿಂದುಳಿದವರೇ ಶೈಕ್ಷಣಿಕ ಸಾಲ ಪಡೆಯುವುದರಿಂದ ಅಂತಹ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಬಡ್ಡಿಯ ಮೇಲೆ ಸಂಪೂರ್ಣ ಸಬ್ಸಿಡಿ ಕೂಡ ನೀಡುತ್ತದೆ.

ವಾರ್ಷಿಕ ಆದಾಯ 4.5 ಲಕ್ಷ ರೂ. ಮಿತಿಯೊಳಗೆ ಇರುವ ವಿದ್ಯಾರ್ಥಿಗಳು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಆದಾಯ ಪ್ರಮಾಣ ಪತ್ರವನ್ನು ಬ್ಯಾಂಕ್​ಗೆ ಸಲ್ಲಿಕೆ ಮಾಡಿದಲ್ಲಿ ಅದನ್ನು ಪರಿಶೀಲಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ(ಎಂಎಚ್​ಆರ್​ಡಿ) ಜಿಲ್ಲಾ ಮಟ್ಟದ ಸಮಿತಿ ರಚನೆ ಮಾಡುತ್ತದೆ. ಈ ಸಮಿತಿ ಅಗತ್ಯ ದಾಖಲೆ ಪರಿಶೀಲಿಸಿದ ನಂತರ ಅರ್ಹತೆ ಹೊಂದಿದ್ದರೆ ಸಬ್ಸಿಡಿ ದೊರೆಯಲಿದೆ. 2009-10ನೇ ಸಾಲಿನಿಂದೀಚೆಗಿರುವವರಿಗೆ ಮಾತ್ರವೇ ಇದರ ಅನುಕೂಲ ಪಡೆದುಕೊಳ್ಳಲು ಸಾಧ್ಯ.

ಶೈಕ್ಷಣಿಕ ಸಾಲಕ್ಕೆ ಅರ್ಹತೆ: ವಿದ್ಯಾರ್ಥಿ ಭಾರತೀಯ ಪ್ರಜೆಯಾಗಿರಬೇಕು. ಹೈಯರ್ ಸೆಕೆಂಡರಿ(10+2) ವಿದ್ಯಾಭ್ಯಾಸದ ನಂತರ ಎಂಟ್ರೆನ್ಸ್ ಟೆಸ್ಟ್ ಅಥವಾ ಮೆರಿಟ್ ಮೂಲಕ ಆಯ್ಕೆಯಾದ ವಿದ್ಯಾರ್ಥಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಲು ಸಾಲ ಪಡೆಯಲು ಅರ್ಹನಾಗಿರುತ್ತಾನೆ. ಮೆರಿಟ್ ಕೋಟಾದಲ್ಲಿ ಆಯ್ಕೆಯಾದ ವಿದ್ಯಾರ್ಥಿ ಒಂದೊಮ್ಮೆ ಅದರ ಬದಲಾಗಿ ಮ್ಯಾನೇಜ್​ವೆುಂಟ್ ಕೋಟಾದಲ್ಲಿ ಸೇರಲು ಇಚ್ಛಿಸಿದಲ್ಲಿ ಸಹ ಈ ಸಾಲಕ್ಕೆ ಅರ್ಹರಾಗುತ್ತಾನೆ.

ಒಂದೇ ಅರ್ಜಿ ಸಾಕು

ಬ್ಯಾಂಕ್​ಗಳಲ್ಲಿ ಶೈಕ್ಷಣಿಕ ಸಾಲ ಪಡೆಯಲು ವಿದ್ಯಾರ್ಥಿಗಳು ಹಲವಾರು ಬ್ಯಾಂಕ್​ಗೆ ಭೇಟಿ ನೀಡಿ ಮಾಹಿತಿ ಪಡೆದು ಅರ್ಜಿ ಸಲ್ಲಿಸುವ ರಗಳೆಯಿಂದ ಮುಕ್ತ ನೀಡಲು ಕೇಂದ್ರ ಸರ್ಕಾರ ‘ವಿದ್ಯಾ ಲಕ್ಷ್ಮೀ’ ಯೋಜನೆ ಜಾರಿಗೆ ತಂದಿದೆ. ಸಾಲ ಪಡೆಯಲಿಚ್ಛಿಸುವ ವಿದ್ಯಾರ್ಥಿ ಈ ಲಿಂಕ್​ಗೆ https://www.vidyalakshmi.co.in/Students/ ಭೇಟಿ ನೀಡಿ ಮೊದಲಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಆನಂತರ ಸಾಲದ ಅರ್ಜಿ ಭರ್ತಿ ಮಾಡಿದರೆ ಆ ಅರ್ಜಿಯು ವಿದ್ಯಾಲಕ್ಷ್ಮೀ ಯೋಜನೆಯಡಿ ನೋಂದಾಯಿಸಿಕೊಂಡಿರುವ ಬ್ಯಾಂಕ್​ಗಳಿಗೆ ತಲುಪಲಿದೆ. ಆನಂತರ ಬ್ಯಾಂಕ್ ನೀಡುವ ಬಡ್ಡಿಯ ವಿವರದೊಂದಿಗೆ ಯಾವ ಬ್ಯಾಂಕ್​ನಲ್ಲಿ ಸಾಲ ತೆಗೆದುಕೊಳ್ಳಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಟ್ಟಾರೆ 39 ಬ್ಯಾಂಕ್​ಗಳು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, 62 ವಿವಿಧ ಯೋಜನೆಗಳಲ್ಲಿ ಸಾಲ ದೊರೆಯಲಿದೆ. ವಿದ್ಯಾರ್ಥಿಗಳು ವಿದ್ಯಾಲಕ್ಷ್ಮೀ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿಯ ಸ್ಥಿತಿ ಪರಿಶೀಲನೆ ಕೂಡ ಮಾಡಬಹುದು.

ಸಾಲ ಪಡೆಯಲು ಇವೆಲ್ಲ ಮುಖ್ಯ

ಅಂಕಪಟ್ಟಿ
ಕಾಲೇಜಿನ ಪ್ರವೇಶ ಪಡೆದಿರುವುದಕ್ಕೆ ರಸೀದಿ
ಕಾಲೇಜಿನ ವ್ಯಾಸಂಗಕ್ಕೆ ವೆಚ್ಚವಾಗುವ ಶುಲ್ಕದ ಪಟ್ಟಿ
ಇತ್ತೀಚಿನ ಎರಡು ಭಾವಚಿತ್ರ
ಮತದಾರ ಗುರುತಿನ ಅಥವಾ
ಆಧಾರ್ ಕಾರ್ಡ್ ಪ್ರತಿ
ಜವಾಬ್ದಾರಿ ಹೆಚ್ಚುತ್ತದೆ

ಮಧ್ಯಮವರ್ಗದ ವಿದ್ಯಾರ್ಥಿಗಳಿಗೆ , ಓದಲು ತುಂಬ ಆಸಕ್ತಿ ಇದ್ದಾಗ, ಆರ್ಥಿಕವಾಗಿ ಸಬಲರಿಲ್ಲದಿರುವಾಗ, ಮುಂದೆ ಓದಲು ಶಿಕ್ಷಣ ಸಾಲ ಒಂದು ಆಯ್ಕೆಯಾಗಿರುತ್ತದೆ. ಉದ್ಯೋಗ ಹಿಡಿದು ಈ ಸಾಲವನ್ನು ತೀರಿಸಬೇಕೆಂಬ ಜವಾಬ್ದಾರಿ ನಮಗೆ ಅರಿವಿಲ್ಲದಂತೆಯೇ ಬಂದುಬಿಡುತ್ತದೆ. ಆಗ ಸ್ನೇಹಿತರ ಜತೆ ಅಲ್ಲಿ ಇಲ್ಲಿ ಸುತ್ತಾಡೋದಕ್ಕೆಲ್ಲ ಮನಸ್ಸೂ ಆಗೋದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಾವು ಸ್ವತಂತ್ರವಾಗಿ ನಮ್ಮ ದುಡ್ಡಲ್ಲೇ ಓದಿದ್ದರ ಖುಷಿ ನಮಗೆ ಸಿಗುತ್ತದೆ. ನಾನು ಇಂಜಿನಿಯರಿಂಗ್ ಕೋರ್ಸ್​ಗೆ ಶಿಕ್ಷಣ ಸಾಲ ಪಡೆದಿದ್ದೆ. ನಾನು ಮೂರೇ ವರ್ಷದಲ್ಲಿ ತೀರಿಸಿದ್ದೇನೆ. ಸಾಲ ತೀರಿಸಿದ ನಿರಾಳತೆಯೂ, ಓದಿದ ಖುಷಿಯೂ ಇದೆ. ಅದರಲ್ಲೂ ಕಡೆಯ ಇನ್​ಸ್ಟಾಲ್​ವೆುಂಟ್ ಕಟ್ಟುವಾಗಲಂತೂ ಅದು ಕೊಡುವ ಖುಷಿ ಹೇಳತೀರದ್ದು.

| ಚಂದ್ರಪ್ರಭಾ ಹೆಗಡೆ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿ

ಪಿಪಿಎಫ್.

ಪಿಪಿಎಫ್ ಕುರಿತು ಮಾಹಿತಿ.
Jun 27, 2016

ಪಿಪಿಎಫ್ ನಿಯಮ ಈಗ ಬದಲಾಗಿದೆ. ಲಾಕಿಂಗ್‌ ಸಮಯ 7 ವರ್ಷದಿಂದ 5 ವರ್ಷಕ್ಕೆ ಇಳಿದಿದೆ. ಇದು ದುಡ್ಡು ಹಾಕಿ ಸುಮ್ಮನೆ ಕುಳಿತವರಿಗೆ ಸಂತಸದ ಸುದ್ದಿ. ನಿಜ ಹೇಳಬೇಕಾದರೆ ದೀರ್ಘಾವಧಿಗೆ ಪಿಪಿಎಫ್ ಒಳ್ಳೇ ಹೂಡಿಕೆ. ಆದರೆ ಮಧ್ಯೆ ದುಡ್ಡು ಬೇಕು ಎನ್ನುವವರಿಗೆ ಕೈ ಸುಟ್ಟ ಅನುಭವ. ಅದಕ್ಕೆ ಪಿಪಿಎಫ್ ಹೇಗೆ, ಏನು ಅನ್ನೋಕೆ ಇಲ್ಲಿದೆ ಮಾಹಿತಿ.

ಉಳಿತಾಯಕ್ಕೆಂದೇ ತರಾವರಿ ಸ್ಕೀಮುಗಳಿದ್ದಾವೆ. ಅತ್ಯಾಕರ್ಷಕ ಬಡ್ಡಿ ಕೊಡುತ್ತೇವೆಂದು ಜನರ ತಲೆಯ ಮೇಲೆ ಬರೆ ಎಳೆದ ಬ್ಲೇಡ್‌ ಕಂಪನಿಗಳು ಸರ್ಕಾರದ ಬಿಗಿನೀತಿಯಿಂದಾಗಿ ಮೂಲೆ ಸೇರಿವೆ. ಜನರ ನಂಬುಗೆಯನ್ನು ಈವರೆಗೂ ಇಟ್ಟುಕೊಂಡಿರುವ ಬ್ಯಾಂಕುಗಳು, ಅಂಚೆ ಕಚೇರಿಗಳು ಸರ್ಕಾರದ ಹಣದುಬ್ಬರ ನಿಯಂತ್ರಣದ ಹಾವು ಏಣಿಯಾಟದಲ್ಲಿ ಬಡ್ಡಿದರವನ್ನು ಆಗಸಕ್ಕೇರಿಸಿ ದುಪ್ಪನೆ ಪಾತಾಳಕ್ಕಿಳಿಸುತ್ತವೆ. ಇಂದು ಜನಸಾಮಾನ್ಯ ತನ್ನ ಹಣವನ್ನು ಅಲ್ಪಕಾಲದ ವಿನಿಯೋಜನೆಯಲ್ಲಿ ತೊಡಗಿಸಬೇಕೋ, ದೀರ್ಘ‌ಕಾಲೀನ ಯೋಜನೆಯಲ್ಲಿ ತೊಡಗಿಸಬೇಕೋ ಎಂಬ ಗೊಂದಲದಲ್ಲಿದ್ದಾನೆ. ಯಾವ ಆರ್ಥಿಕ ಪಂಡಿತರಿಗೂ ಅಳತೆಗೆ ಸಿಕ್ಕದ ಮಾರುಕಟ್ಟೆಯಲ್ಲಿ ಇಂದು ನಾವಿದ್ದೇವೆ.

ಇದು ಸಾಮಾನ್ಯರ ಪಾಡಾದರೆ ಉಳ್ಳವರ ಚಿಂತೆಯೇ ಬೇರೆ. ವರಮಾನ ತೆರಿಗೆಯಲ್ಲಿ ಉಳಿಸಲೋಸುಗ ಏನೇನು ಯೋಜನೆಗಳಿದ್ದಾವೆ ಎಂಬುದರ ಬಗ್ಗೆಯೇ ಅವರ ಕಣ್ಣು. ಪ್ರತಿಬಾರಿ ಕೇಂದ್ರ ಬಜೆಟ್‌ನಲ್ಲಿ ಏನು ಉಳಿತಾಯದ ಘೋಷಣೆಗಳಿದ್ದಾವೆ ಎಂದು ಗೋಣು ಉದ್ದಮಾಡಿ ಕಾಯುತ್ತಿರುತ್ತಾರೆ. ಆದರೆ ಕೆಲ ವರ್ಷದಿಂದ ಸಾಮಾನ್ಯವಾಗಿ ಎಲ್ಲರಿಗೂ ದಕ್ಕುವ ವರಮಾನ ತೆರಿಗೆ ಕಾಯ್ದೆ ಸೆಕ್ಷನ್‌ 80ಸಿ ಪ್ರಕಾರ ಕೆಲವೊಂದು ನಿರ್ದಿಷ್ಟ ಉಳಿತಾಯಗಳಲ್ಲಿ ತೊಡಗಿಸಿದ ಒಂದುವರೆ ಲಕ್ಷ ರೂಪಾಯಿಗಳವರೆಗಿನ ಹಣ ತೆರಿಗೆ ವಿನಾಯಿತಿಗೆ ಒಳಪಡುತ್ತದೆ. ಆ ಬಗೆಯಲ್ಲಿ ಒಂದು ಉಳಿತಾಯವೆಂದರೆ ಪಿಪಿಎಫ್.

1968ರ ಲಾಗಾಯ್ತಿನಿಂದಲೂ ಜನರ ವಿಶ್ವಾಸದೊಂದಿಗೆ ಊರ್ಜಿತದಲ್ಲಿರುವ ಕೇಂದ್ರಸರ್ಕಾರದ ಉಳಿತಾಯ ಖಾತೆಯಿದು. ಈವರೆಗೆ ವಾರ್ಷಿಕ ಶೇ.8.7 ಬಡ್ಡಿ ನೀಡುತ್ತಿದ್ದ ಈ ಖಾತೆಗೆ  2016-17ನೇ ಸಾಲಿನಲ್ಲಿ ಬಡ್ಡಿದರವನ್ನು ಶೇ8.1 ಕ್ಕೆ ಇಳಿಸಿದೆ.

ಯಾರು ಖಾತೆಯನ್ನು ಆರಂಭಿಸಬಹುದು?
ಭಾರತದಲ್ಲಿ ವಾಸವಿರುವ ಯಾವುದೇ ವ್ಯಕ್ತಿ ಈ ಖಾತೆಯನ್ನು ಹೊಂದಬಹುದು. 15 ವರ್ಷಗಳ ದೀರ್ಘ‌ಕಾಲದ ಈ ಉಳಿತಾಯ ಯೋಜನೆಯನ್ನು ಒಬ್ಬ ವ್ಯಕ್ತಿ ಒಂದು ಖಾತೆಯನ್ನು ಮಾತ್ರ ತೆರೆಯಬಹುದು. ಜೊತೆಗೆ ಅಪ್ರಾಪ್ತ ವಯಸ್ಕ ಮಕ್ಕಳ ಹೆಸರಿನಲ್ಲಿ  ಅವರ ಪಾಲಕರು ಇನ್ನೊಂದು ಖಾತೆಯನ್ನು ತೆರೆಯಬಹುದು. ಅಂದರೆ ಒಂದು ಕುಟುಂಬದಲ್ಲಿ ಗಂಡ,ಹೆಂಡತಿ ಹಾಗೂ ಎರಡು ಮಕ್ಕಳ ಹೆಸರಿನಲ್ಲಿ ಒಟ್ಟು ನಾಲ್ಕು ಖಾತೆಗಳನ್ನು ತೆರೆಯಬಹುದು.

ಅನಿವಾಸಿ ಭಾರತೀಯ ಈ ಖಾತೆಯನ್ನು ತೆರೆಯಲು ಸಾಧ್ಯವಿಲ್ಲ. ಆದರೆ ಈ ಮೊದಲೇ ಪಿಪಿಎಫ್ ಖಾತೆ ಇದ್ದಲ್ಲಿ ಅದನ್ನು 15 ವರ್ಷಗಳವರೆಗೆ ಮುಂದುವರೆಸಬಹುದು. ಅಲ್ಲಿಯವರೆಗೆ ಪ್ರತಿ ವರ್ಷ ಹಣವನ್ನು ಅದಕ್ಕೆ ತುಂಬಬಹುದು. 2011ರ ಸಾಲಿನಿಂದ ಹಿಂದೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ ಖಾತೆ ಆರಂಭಿಸುವುದನ್ನು ನಿಲ್ಲಿಸಲಾಗಿದೆ. 2005ಕ್ಕಿಂತ ಹಿಂದೆ ಮಾಡಿದ ಹೆಚ್‌ಯುಎಫ್ ಖಾತೆಯನ್ನು ಹೊರತುಪಡಿಸಿ ಉಳಿದ ಹೆಚ್‌ಯು ಎಫ್ ನಲ್ಲಿದ್ದ ಹಣವನ್ನು 2011ರಲ್ಲಿ ಮುಕ್ತಾಯಗೊಳಿಸಿ ಹಿಂತಿರುಗಿಸಲಾಗಿದೆ.

ಪಿಪಿಎಫ್ ಖಾತೆಗಳನ್ನು ಎಲ್ಲಿ ಆರಂಭಿಸಬಹುದು?
ಈ ಖಾತೆಯನ್ನು ನಿರ್ಧಿಷ್ಟ ಅಂಚೆ ಕಚೇರಿಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳ ನಿರ್ಧಿಷ್ಟಪಡಿಸಿದ ಶಾಖೆಗಳಲ್ಲಿ ಈ ಖಾತೆ ಆರಂಭಿಸಬಹುದು. ಪದೇ ಪದೇ ತಮ್ಮಕಾರ್ಯದ ನಿಮಿತ್ತ ವರ್ಗಾವಣೆಯಾಗುವವರಿಗೆ ಅನುಕೂಲವಾಗಲೆಂದು ಪಿಪಿಎಫ್ ಖಾತೆಗಳನ್ನು ಒಂದು ಅಂಚೆಕಚೇರಿಯಿಂದ ಇನ್ನೊಂದು ಅಂಚೆಕಚೇರಿಗಾಗಲೀ, ಅಂಚೇಕಚೇರಿಯಿಂದ ಬ್ಯಾಂಕುಗಳಿಗಾಗಲಿ,ಬ್ಯಾಂಕಿನಿಂದ ಅಂಚೇಕಚೇರಿಗಾಗಲಿ ವರ್ಗಾಯಿಸಿಕೊಂಡು ಅದೇ ಖಾತೆಯನ್ನು ಮುಂದುವರೆಸುವ ಅವಕಾಶಗಳಿವೆ.

ಖಾತೆ ತೆರೆಯಲುದಾಖಲೆಗಳು
ಭರ್ತಿಮಾಡಿದ ಪಿಪಿಎಫ್ ಖಾತೆಯ ಅರ್ಜಿ(ಫಾರಂ ಎ)
ಎರಡು ಇತ್ತೀಚಿನ ಪಾಸ್‌ಪೊರ್ಟ್‌ ಅಳತೆಯ ಭಾವಚಿತ್ರ
ಪಾನ್‌ ಕಾರ್ಡಿನ ನಕಲು
ವಾಸಸ್ಥಳ ವಿಳಾಸದ ದೃಢೀಕರಣ(ಚುನಾವಣಾ ಗುರುತಿನ ಚೀಟಿ,ಆಧಾರ್‌,ಡ್ರೆ„ವಿಂಗ್‌ ಲೈಸೆನ್ಸ್‌ ಇತ್ಯಾದಿ)

ಪಿಪಿಎಫ‌ ಖಾತೆಯ ನಿಯಮಗಳೇನು?
ಇದೊಂದು 15 ವರ್ಷಗಳ ದೀರ್ಘ‌ಕಾಲೀನ ಉಳಿತಾಯ ಯೋಜನೆ. ಪ್ರತಿ ವರ್ಷ ಕನಿಷ್ಟ ರೂ 500/- ಈ ಖಾತೆಗೆ ಜಮಾ ಮಾಡಲೇಬೇಕು. ಗರಿಷ್ಟ ರೂ.150000/- ಜಮಾಮಾಡಬಹುದು. ಈ ಖಾತೆಯ ನಿಯಮಗಳೆಲ್ಲಾ ಒಂದು ಆರ್ಥಿಕ ವರ್ಷ ಅಂದರೆ ಏಪ್ರಿಲ್‌ ನಿಂದ ಮುಂದಿನ ಮಾರ್ಚ್‌ವರೆಗೆ ಲೆಕ್ಕಾಚಾರ ಹಾಕಲಾಗುತ್ತದೆ. ಈ ಒಂದು ಆರ್ಥಿಕ ವರ್ಷದಲ್ಲಿ ಒಟ್ಟು 12 ಬಾರಿ ಈ ಖಾತೆಗೆ ಜಮಾಮಾಡಬಹುದಾಗಿದೆ. ಪ್ರತಿ ವರ್ಷ ಕನಿಷ್ಟ ರೂ.500/- ಪಾವತಿಸಲು ವಿಫ‌ಲರಾದರೆ ರೂ.50/- ದಂಡಶುಲ್ಕ ಕಟ್ಟಬೇಕಾಗುತ್ತದೆ.

ಬಡ್ಡಿ ಹೇಗೆ? ಏನು?ಎತ್ತಾ?
ಬಡ್ಡಿ ಲೆಕ್ಕಾಚಾರವನ್ನು ವಾರ್ಷಿಕವಾಗಿ ಮಾಡಲಾಗುತ್ತದೆ. ಬ್ಯಾಂಕಿನ ಠೇವಣಿಗಳಿಗೆ ಮೂರು ತಿಂಗಳಿಗೊಮ್ಮೆ ಬಡ್ಡಿಹಾಕಿ ಚಕ್ರಬಡ್ಡಿ ನೀಡುತ್ತಾರೆ. ಇಲ್ಲಿ ವಾರ್ಷಿಕವಾಗಿ ಹಾಕುವುದರಿಂದ ವಾರ್ಷಿಕವಾಗಿ ಚಕ್ರಬಡ್ಡಿಯಾಗುತ್ತದೆ. ಬಡ್ಡಿ ಲೆಕ್ಕಾಚಾರ ಮಾಡುವಾಗ ಪ್ರತಿ ತಿಂಗಳು 5ನೇ ತಾರೀಖೀನಿಂದ ತಿಂಗಳ ಕೊನೆಯವರೆಗೆ ಇರುವ ಶಿಲ್ಕಿಗೆ ಮಾತ್ರ ಬಡ್ಡಿ ಹಾಕಲಾಗುತ್ತದೆ. ಉದಾಹರಣೆಗೆ ನೀವು ಏಪ್ರಿಲ್‌ 6ನೇ ತಾರೀಖೀಗೆ ರೂ.150000/- ಹಣ ಕಟ್ಟಿದರೆ ಆ ತಿಂಗಳಿಗೆ ಆ 150000/- ಹಣಕ್ಕೆ ಯಾವ ಬಡ್ಡಿಯೂ ಬರುವುದಿಲ್ಲ. ಅದೇ 5ನೇ ತಾರೀಖೀಗೆ ಕಟ್ಟಿದರೆ ಆ ತಿಂಗಳಿಗೆ ಬಡ್ಡಿದೊರೆಯುತ್ತದೆ.(ಶೇ.8.1 ರ ಪ್ರಕಾರ ರೂ.150000/- ಕ್ಕೆ ತಿಂಗಳಿಗೆ ಬಡ್ಡಿ 1012.50 ಆಗುತ್ತದೆ.)

ಪಿಪಿಎಫ್ ಹಣ ವಾಪಸ್ಸು ಪಡೆಯಬಹುದು
ಇದು 15 ವರ್ಷದ ಠೇವಣಿ ಯೋಜನೆಯಾಗಿದ್ದರೂ ಖಾತೆ ತೆರೆದು ಏಳು ವರ್ಷಗಳ ನಂತರ ಪ್ರತಿ ವರ್ಷ ಹಣ ಹಿಂಪಡೆಯಬಹುದು. ಅಂದರೆನೀವು ಹಣ ಹಿಂಪಡೆಯುವ ಆರ್ಥಿಕವರ್ಷದ ಹಿಂದಿನ ನಾಲ್ಕು ವರ್ಷದ ಅಖೈರಿಗೆ ಇರುವ ಬ್ಯಾಲೆನ್ಸಿನ ಶೇ.50 ರಷ್ಟನ್ನಾಗಲೀ ಅಥವಾ ಹಣ ಹಿಂಪಡೆಯುವ ಹಿಂದಿನ ಆರ್ಥಿಕವರ್ಷದ ಬ್ಯಾಲೆನ್ಸಿನ ಶೇ.50 ಯಾವುದು ಕಡಿಮೆಯೋ ಅಷ್ಟು ಹಣವನ್ನು ಹಿಂಪಡೆಯಬಹುದು. ಹಿಂಪಡೆಯುವಾಗ ಫಾರಂ ಸಿ ನೀಡಬೇಕಾಗುತ್ತದೆ. 15 ವರ್ಷ ಮುಗಿದ ನಂತರ ಅಷ್ಟೇ ಹಣವನ್ನು ಹಿಂಪಡೆಯಬಹುದು. ಮತ್ತೆ ಐದು ವರ್ಷಗಳಿಗೆ ಖಾತೆ ಮುಂದುವರೆಸುವುದಾದರೆ ಬ್ಯಾಲೆನ್ಸಿನ ಶೇ.60ರಷ್ಟನ್ನು ಹಿಂಪಡೆದು ಮುಂದುವರೆಸಬಹುದು. ಆಗ ಫಾರಂ ಹೆಚ್‌ ನೀಡಿ ಪ್ರತಿ ಐದು ವರ್ಷಕ್ಕೊಮ್ಮೆ ಮುಂದುವರೆಸುತ್ತಾ ಹೋಗಬಹುದು.

ಸಾಲ ಸಿಗುತ್ತೆ , ಒಬ್ಬರಿಗಿಂತ ಹೆಚ್ಚು ಮಂದಿಗೆ ನಾಮಿನೇಷನ್‌
ಪಿಪಿಎಫ್ ಖಾತೆಯಲ್ಲಿ ಏಳನೇ ವರ್ಷದಿಂದ ಪ್ರತಿ ವರ್ಷ ಹಣ ಹಿಂಪಡೆಯುವ ಅವಕಾಶವಿರುವುದರಿಂದ ಎರಡನೇ ವರ್ಷದಿಂದ ಐದು ವರ್ಷದೊಳಗೆ ಹಿಂದಿನ ಆರ್ಥಿಕ ವರ್ಷದಲ್ಲಿರುವ ಶಿಲ್ಕಿನ ಶೇ25 ರಷ್ಟು ಸಾಲ ಪಡೆಯಬಹುದಾಗಿದೆ. ಅದಕ್ಕೆ ಶೇ.2 ರಂತೆ ಬಡ್ಡಿಹಾಕಲಾಗುತ್ತದೆ.

ಇದಕ್ಕೊಂದು ವಿಶಿಷ್ಟ ಅವಕಾಶವಿದೆ.
ಎಲ್ಲಾ ಠೇವಣಿಗಳಿಗೆ ಒಂದು ಠೇವಣಿಗೆ ಒಬ್ಬರನ್ನು ಮಾತ್ರ ನಾಮಿನಿ ಮಾಡಿ ಅವರ ನಂತರ ಆ ಹಣಕ್ಕೆ ನಾಮಿನಿಯನ್ನು ವಾರಸುದಾರರನ್ನಾಗಿ ಮಾಡಬಹುದು. ಆದರೆ ಪಿಪಿಎಫ್ಗೆ ಮಾತ್ರ ನೀವು ಒಂದಕ್ಕಿಂತ ಹೆಚ್ಚು ಜನರನ್ನು ನಾಮಿನಿಮಾಡಿ ಅವರವರಿಗೆ ಶೇಕಡಾವಾರು ಹಿಸ್ಸೆಮಾಡುವಂತೆ ವರ್ಗೀಕರಿಸಲು ಅವಕಾಶವಿದೆ. ಬೇಕೆಂದಾಗಲೆಲ್ಲಾ ನಾಮಿನೇಷನ್‌ ಬದಲಾಯಿಸಲು ಅವಕಾಶವಿದೆ.

ಹಣ ಹಿಂಪಡೆಯಬಹುದಾದ ಮಾದರಿ
ಒಂದೊಮ್ಮೆ ನೀವು 2010-11ರ ಸಾಲಿನಲ್ಲಿ ಪಿಪಿಎಫ‌ ಖಾತೆ ಆರಂಭಿಸಿದ್ದೀರಿ. 2016-17 ನೇ ಸಾಲಿಗೆ ಏಳು ವರ್ಷವಾಗಿದೆ ಹಣ ಹಿಂಪಡೆಯಬೇಕು ಅಂದರೆ, ನೀವು ಹಣ ಪಡೆಯುವ ಆರ್ಥಿಕ ವರ್ಷದ ಹಿಂದಿನ ನಾಲ್ಕನೇ ಆರ್ಥಿಕ ವರ್ಷದ ಶಿಲ್ಕಿನ ಶೇ.50 ರಷ್ಟು ಹಿಂಪಡೆಯಬಹುದು. 2012-13 ನೇ ಸಾಲಿನ ಬ್ಯಾಲೆನ್ಸಿನ ಶೇ50 ಎಂದರೆ ರೂ.150000/- ಹಿಂಪಡೆಯಬಹುದು.

ಕೇಂದ್ರ ಸರ್ಕಾರದ ಹೊಸ ಆದೇಶದ ಪ್ರಕಾರ ಐದು ವರ್ಷ ಆಗಿರುವ ಪಿಪಿಎಫ್ ಖಾತೆಗಳನ್ನು ಕೆಲವು ನಿರ್ಧಿಷ್ಟ ಉದ್ದೇಶಗಳಲ್ಲಿ ಮುಕ್ತಾಯಗೊಳಿಸಬಹುದು ಎಂದಿದೆ. ಮಕ್ಕಳ ಉನ್ನತ ವಿದ್ಯಾಭ್ಯಾಸದ ಸಲುವಾಗಿ, ಕುಟುಂಬದವರ  ಮಾರಣಾಂತಿಕ ಕಾಯಿಲೆಯ ಚಿಕಿತ್ಸೆಗಾಗಿ ಖಾತೆಯನ್ನು ಮುಕ್ತಾಯಗೊಳಿಸಿ ಣ ಹಿಂಪಡೆಯಬಹುದು. ಅದಕ್ಕೆ ಅಗತ್ಯವಾದ ದಾಖಲೆಗಳನ್ನು ನೀಡಬೇಕಾಗುತ್ತದೆ.   

ಸಿಂಧೂದರ್ಶನ ಉತ್ಸವ

ಮೂರೂವರೆ ಸಾವಿರ ವರ್ಷ ಪುರಾತನ ನಾಗರಿಕತೆಯ ಶ್ರೇಷ್ಠ ಕುರುಹಾಗಿ ಹರಿಯುತ್ತಿರುವ ಸಿಂಧೂನದಿ ಭಾರತೀಯ ಅಸ್ಮಿತೆಯ ದ್ಯೋತಕ. ಭಾರತ ಮತ್ತು ಸಿಂಧೂ ಇವೆರಡೂ ಒಂದೇ ಆಗಿದ್ದು, ದೇಶವಾಸಿಗಳ ಭಾವಕೋಶದಲ್ಲಿ ಪಾವಿತ್ರ್ಯ ಹೆಮ್ಮೆ, ಶಕ್ತಿ, ವೈಭವದ ಪ್ರತೀಕವಾಗಿವೆ. ಇಡೀ ದೇಶಕ್ಕೆ ಭಾರತೀಯ ಸಾಂಸ್ಕೃತಿಕ ವೈಭವ ಹಾಗೂ ರಾಷ್ಟ್ರವಾದದ ದರ್ಶನವನ್ನು ಮಾಡಿಸಲು ಪ್ರತಿವರ್ಷ ನಡೆಯುವ ಸಿಂಧೂದರ್ಶನ ಉತ್ಸವ ಈ ಬಾರಿ ಜೂನ್ 23ರಿಂದ 26ರವರೆಗೆ ನಡೆಯುತ್ತಿದೆ.

ರವೀಂದ್ರ ಎಸ್. ದೇಶಮುಖ್,ಬೆಂಗಳೂರು
ನಾಗರಿಕತೆಗಳು ಹುಟ್ಟಿ, ಅರಳಿ ಬೆಳೆದಿದ್ದೇ ನದಿತೀರಗಳಲ್ಲಾದ್ದರಿಂದ ನದಿಗಳಿಗೂ ಮಾನವನಿಗೂ ವಿಶಿಷ್ಟ ಸಂಬಂಧವಿದೆ. ನದಿಗಳು ಸಂಸ್ಕೃತಿಯ ಪ್ರವಾಹ. ಭಾರತೀಯರಿಗಂತೂ ನದಿಗಳೆಂದರೆ ಶ್ರದ್ಧೆ, ಭಕ್ತಿ, ಪಾವಿತ್ರ್ಯ ಅಷ್ಟೇ ಅಲ್ಲ ಜೀವನಾಡಿಯೂ ಹೌದು. ದಿನ ಬೆಳಗಾದರೆ ಏಳು ನದಿಗಳನ್ನು ಆಹ್ವಾನಿಸಿಕೊಂಡೇ ಸ್ನಾನ ಮಾಡುವ ಸಂಸ್ಕೃತಿ ಈ ನೆಲದ್ದು. ‘ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತೀ | ನರ್ಮದೇ ಸಿಂಧು ಕಾವೇರೀ ಜಲೇಸ್ಮಿನ್ ಸನ್ನಿಧಿಂ ಕುರು ||’ (ನಾನು ಸ್ನಾನ ಮಾಡಬೇಕೆಂದಿರುವ ಈ ನೀರಿನಲ್ಲಿ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ ಈ ಏಳು ಪವಿತ್ರ ನದಿಗಳನ್ನು ಆಹ್ವಾನಿಸಬಯಸುತ್ತೇನೆ ಹಾಗೂ ನನ್ನನ್ನು ಆಶೀರ್ವದಿಸು). ಗಂಗೆ ಪಾಪಗಳನ್ನು ನಾಶಗೊಳಿಸಿದರೆ ಸಿಂಧೂ ಭಾರತದ ಅಸ್ತಿತ್ವವನ್ನೇ ಪ್ರತಿನಿಧಿಸುವವಳು. ಸಾಮರಸ್ಯವನ್ನು ಬೆಸೆಯುವವಳು. ಸಿಂಧೂ ಆಂಗ್ಲರ ಬಾಯಲ್ಲಿ ಇಂಡಸ್ ಆಗಿ ಅದೇ ಹಿಂದೂಸ್ಥಾನ, ಇಂಡಿಯಾ ಆಗಿದ್ದು ಗೊತ್ತಿರುವಂಥದ್ದೇ. ಹಾಗಾಗಿ ಭಾರತವೆಂದರೆ ಸಿಂಧೂ – ಸಿಂಧೂ ಎಂದರೆ ಭಾರತ. ಸಿಂಧೂ ಗರ್ಜಿಸಿದರೆ ಅದು ಸ್ವರ್ಗದವರೆಗೂ ಕೇಳಿಸುತ್ತದೆ ಎಂದು ಪುರಾಣಗಳಲ್ಲಿ ವರ್ಣಿತವಾಗಿದೆ. ಈ ಶಕ್ತಿಗೆ, ಮೋಡಿಗೆ ಬೆರಗಾಗಿಯೇ ಹಲವು ನದಿಗಳು ಸಿಂಧೂವಿನಲ್ಲಿ ಒಂದಾಗಲು ತವಕಿಸುತ್ತವೆಯೇನೋ. ಸಿಂಧೂವಿನ ಒಡಲು ಸೇರಿದ ಮೇಲಷ್ಟೇ ಅಂಥ ನದಿಗಳ ಜೀವನಯಾತ್ರೆ ಪೂರ್ಣ.

ದೇಶ ವಿಭಜನೆಯ ದುರಂತ ಸಂದರ್ಭದಲ್ಲಿ ಸಿಂಧೂನದಿಯ ಬಹುಪಾಲು ಪಾಕಿಸ್ತಾನದ ಪಾಲಾಯಿತು. ಈಗ ಭಾರತದಲ್ಲಿ ಹರಿಯುತ್ತಿರುವುದು 300 ಕಿ.ಮೀ.ಗಳಷ್ಟು ಮಾತ್ರ. ಜಮ್ಮು-ಕಾಶ್ಮೀರ ರಾಜ್ಯದ ಲಡಾಖ್ ಪ್ರಾಂತ್ಯದ ಲೇಹ್ ಬಳಿ ಹರಿಯುವ ಸಿಂಧೂನದಿ ಸಂಸ್ಕೃತಿಯ ಚೇತನವಾಗಿ, ಭಾವೈಕ್ಯತೆಯ ಶಕ್ತಿಯಾಗಿ ಜನಮಾನಸಕ್ಕೆ ಪ್ರೇರಣೆಯಾಗಿದ್ದಾಳೆ. ಈ ಅಸ್ಮಿತೆಯನ್ನು ಪರಿಚಯಿಸಲು ಹಾಗೂ ಲಡಾಖ್ ಭಾರತದ ಅವಿಭಾಜ್ಯ ಅಂಗ ಮತ್ತು ಶ್ರೇಷ್ಠ ಸಂಸ್ಕೃತಿಯ ಬೀಡು ಎಂದು ಸಾರಲು ಈ ನದಿತೀರದಲ್ಲಿ ಪ್ರತಿವರ್ಷ ನಡೆಯುತ್ತಿರುವ ಭಾವಸಂಗಮವೇ ಸಿಂಧೂದರ್ಶನ ಉತ್ಸವ.

ಈ ಉತ್ಸವ ಆರಂಭದ ಹಿನ್ನೆಲೆಯೂ ರೋಚಕವಾಗಿದೆ. ಅದು ಜನವರಿ 1996ರ ಸಂದರ್ಭ. ಹಿರಿಯ ಧುರೀಣ ಲಾಲಕೃಷ್ಣ ಆಡ್ವಾಣಿ, ಹಿರಿಯ ಪತ್ರಕರ್ತ ತರುಣ್ ವಿಜಯ್ ಲಡಾಖ್​ಗೆ ಭೇಟಿ ನೀಡಿದಾಗ ಲೇಹ್​ಗೂ ತೆರಳಿದ್ದರು. ಸಿಂಧೂನದಿಯ ರಮ್ಯತೆ, ಅಲ್ಲಿನ ನೈಸರ್ಗಿಕ ಸೊಬಗು, ಆ ನೆಲದ ಶ್ರೇಷ್ಠತೆಯನ್ನು ಸಾರಿ ಹೇಳಲು ಎದೆಯುಬ್ಬಿಸಿ ನಿಂತಂತಿರುವ ಪರ್ವತಶಿಖರಗಳು, ಲಡಾಖ್ ಜನರ ವಿಶಿಷ್ಟ ಜೀವನಶೈಲಿ, ಸಿಂಧಿ ಭಾಷೆಯ ಸಿರಿವಂತಿಕೆ – ಇವನ್ನೆಲ್ಲ ಕಣ್ಣಾರೆ ಕಂಡಾಗ ಥಟ್ಟನೆ ಅರಳಿದ ಕನಸೆಂದರೆ – ಇಡೀ ಭಾರತವನ್ನೇ ಈ ಸಿಂಧೂತಾಯಿಯ ಮಡಿಲಿಗೆ ತಂದು ನಿಲ್ಲಿಸಬೇಕು. ‘ನೋಡಿ, ಈ ನದಿತಾಯಿಯ ಮಡಿಲಲ್ಲೇ ನಮ್ಮ ಜೀವನಸಂಸ್ಕೃತಿಯ ಸುಮ ಅರಳಿ ವಿಶ್ವಕ್ಕೇ ತನ್ನ ಶ್ರೇಷ್ಠತೆಯ ಕಂಪನ್ನು ಬೀರುತ್ತಿರುವುದು’ ಎಂದು ಸಾರಿಸಾರಿ ಹೇಳಬೇಕು. ಕನಸೇನೋ ಅದ್ಭುತವಾಗಿತ್ತು. ಆದರೆ, ಅದನ್ನು ಪ್ರಾಯೋಗಿಕವಾಗಿ ನನಸು ಮಾಡುವ ದಾರಿ ಅಷ್ಟು ಸುಲಭವಾಗಿರಲಿಲ್ಲ.

ಕ್ಲಿಷ್ಟಕರ ಭೌಗೋಳಿಕ ಸನ್ನಿವೇಶ, ಹವಾಮಾನ ವೈಪರೀತ್ಯ, ಭದ್ರತೆಯ ಆತಂಕ – ಇಷ್ಟೆಲ್ಲ ಸವಾಲು ಎದುರಿಸಬೇಕಾಗಿತ್ತು. ಆದರೆ, ತಾವು ಕಂಡ ಕನಸಿನ ಬೆನ್ನು ಹತ್ತಿದ ತರುಣ್ ವಿಜಯ್ 1997ರಲ್ಲಿ ಮೊದಲ ಸಿಂಧೂದರ್ಶನ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದರು. ಆ ವರ್ಷ ಅಕ್ಟೋಬರ್​ನಲ್ಲಿ ನಡೆದ ಉತ್ಸವವು ಬಳಿಕ (1998ರಿಂದ) ಪ್ರತಿ ವರ್ಷ ಜೂನ್​ನಲ್ಲಿ ಮೂರು ದಿನಗಳ ಕಾಲ ನಡೆಯುತ್ತಿದೆ.

2016ಕ್ಕೆ ಎರಡು ದಶಕ ತುಂಬುತ್ತಿರುವ ಈ ಉತ್ಸವದಲ್ಲಿ ದೇಶಾದ್ಯಂತದ ಸಾವಿರಾರು ಜನರಷ್ಟೇ ಅಲ್ಲದೆ ವಿದೇಶಿಯರೂ ಉತ್ಸಾಹ, ಕುತೂಹಲದಿಂದ ಪಾಲ್ಗೊಳ್ಳುತ್ತಿದ್ದಾರೆ. 2000ನೇ ಸಾಲಿನಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಈ ಉತ್ಸವವನ್ನು ಉದ್ಘಾಟಿಸಿ ‘ಸಿಂಧೂ ಭಾರತದ ಆತ್ಮ’ ಎಂದು ಕರೆದಿದ್ದರು. ಅದೇ ವೇಳೆ ಅವರು ಶಂಕುಸ್ಥಾಪನೆ ನೆರವೇರಿಸಿದ ಸಿಂಧೂ ಸಾಂಸ್ಕೃತಿಕ ಕೇಂದ್ರ ಈಗ ನೋಡುಗರ ಕಣ್ಮನ ತಣಿಸುವುದರ ಜತೆಗೆ, ಅಧ್ಯಯನಪ್ರಿಯರಿಗೆ ಭರಪೂರ ಮಾಹಿತಿಯನ್ನು ಒದಗಿಸುತ್ತಿದೆ. ‘ಸಿಂಧೂದರ್ಶನ ಉತ್ಸವ ಸಮಿತಿ’ ಈಗ ಪ್ರತಿವರ್ಷ ಈ ಉತ್ಸವವನ್ನು ಆಯೋಜಿಸುತ್ತಿದೆ. ಭಾವೈಕ್ಯದ ಶ್ರೇಷ್ಠ ಮಾದರಿಯಾಗಿ ಗುರುತಿಸಲ್ಪಡುತ್ತಿರುವ ಈ ಉತ್ಸವ ಸಂಸ್ಕೃತಿ ವಿನಿಮಯದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.

ಆಯಾ ರಾಜ್ಯಗಳಿಂದ ಬರುವ ಯಾತ್ರಿಕರು ತಮ್ಮ ಪ್ರದೇಶದ ನದಿಗಳಿಂದ ಕುಂಭದಲ್ಲಿ ತರುವ ಪವಿತ್ರ ನೀರನ್ನು ಸಿಂಧೂನದಿಗೆ ಅರ್ಪಿಸುತ್ತಾರೆ. ಇದು ಪ್ರಾಂತ್ಯ-ಪ್ರಾಂತ್ಯಗಳ ನಡುವೆ ಏಕತೆಯ ತಂತಿ ಮೀಟುವುದರೊಂದಿಗೆ ಧನ್ಯತೆಯ ಭಾವವನ್ನೂ ಮೂಡಿತ್ತದೆ.

ಏನೆಲ್ಲ ಇರುತ್ತೆ?:
ಮೂರು ದಿನ ನಡೆಯುವ ಉತ್ಸವದಲ್ಲಿ ಮೊದಲ ದಿನ ಸಿಂಧೂನದಿತೀರದಲ್ಲಿ ಲಡಾಖ್ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಾಹಸ ಕಲೆಗಳು, ಈಶಾನ್ಯ ರಾಜ್ಯಗಳ ಕಲಾವಿದರ ವಿಶೇಷ ಕಲಾಪ್ರದರ್ಶನಗಳು – ಹೀಗೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ದರ್ಶನಾರ್ಥಿಗಳನ್ನು ಸ್ವಾಗತಿಸಲಾಗುತ್ತದೆ. ಎರಡನೇ ದಿನ ಉತ್ಸವದ ಮುಖ್ಯಘಟ್ಟ. ಸಿಂಧೂನದಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆ ಬಳಿಕ ಸಿಂಧೂ ನಾಗರಿಕತೆ, ನದಿಯ ಪ್ರಯಾಣವನ್ನು ವಿವರಿಸಲಾಗುತ್ತದೆ. ಮೂರನೇ ದಿನ ಸಮೀಪದಲ್ಲೇ ಇರುವ ನಿಸರ್ಗರಮ್ಯ ತಾಣಗಳಿಗೆ ವಿಹಾರ ವ್ಯವಸ್ಥೆ ಇರುತ್ತದೆ. ಪ್ರಸಕ್ತ ‘ಸಿಂಧೂದರ್ಶನ ಉತ್ಸವ ಸಮಿತಿ’ ನ ಳಲ್ಲದೆ ನೆರೆಯ ರಾಷ್ಟ್ರಗಳಾದ ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್​ಗಳಿಂದಲೂ ಭಾರೀ ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುತ್ತಾರೆ. ಅದರ ಪರಿಣಾಮವಾಗಿ ಇಲ್ಲಿನ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಿದೆ.

ಸಹಿಷ್ಣುತೆಯ ಪಾಠ!

ದೇಶದಲ್ಲಿ ಅಸಹಿಷ್ಣುತೆಯ ಬಗ್ಗೆ ತರಹೇವಾರಿ ಚರ್ಚೆಗಳು ನಡೆಯುತ್ತಿವೆ. ಆದರೆ, ನಿಜವಾದ ಸಹಿಷ್ಣುತೆ ಮಾತ್ರವಲ್ಲದೆ ಐಕ್ಯತೆ, ಕೋಮು ಸಾಮರಸ್ಯದ ನೈಜ ದರ್ಶನವಾಗುವುದು ಸಿಂಧೂದರ್ಶನ ಉತ್ಸವದಲ್ಲಿ. ಈ ಉತ್ಸವ ನಡೆಯುವುದು ಹಿಂದೂಗಳು ಅಲ್ಪಸಂಖ್ಯಾತರಾಗಿರುವ, ಬೌದ್ಧರು ಬಹುಸಂಖ್ಯಾತರಾಗಿರುವ ಲಡಾಖ್ ಪ್ರಾಂತ್ಯದಲ್ಲಿ. ಆದರೆ ಇದರ ಆಯೋಜನೆಯಲ್ಲಿ ಹಿಂದು, ಮುಸ್ಲಿಮ್ ಕ್ರೖೆಸ್ತ, ಬೌದ್ಧ, ಸಿಖ್ ಧರ್ಮದವರೆಲ್ಲ ಒಟ್ಟಾಗಿ ಸಹಕರಿಸುತ್ತಾರೆ. ಇದಕ್ಕೆ ಕಾರಣ ಸಿಂಧೂ ಅಖಂಡತೆಯ ಪ್ರತೀಕ. ಲಡಾಖ್ ಬುದ್ಧಿಸ್ಟ್ ಅಸೋಶಿಯನ್, ಶಿಯಾ ಮಜ್ಲೀನ್, ಸುನ್ನಿ ಅಂಜುಮನ್, ಕ್ರಿಶ್ಚಿಯನ್ ಮೊರಾವಿಯನ್ ಚರ್ಚ್, ಹಿಂದೂ ಟ್ರಸ್ಟ್, ಸಿಖ್ ಗುರುದ್ವಾರ ಪ್ರಬಂಧಕ್ ಸಮಿತಿ ಸೇರಿದಂತೆ ಹಲವು ಸಂಘಟನೆಗಳು ಉತ್ಸವ ಯಶಸ್ವಿಯಾಗುವಂತೆ ನೋಡಿಕೊಳ್ಳುತ್ತವೆ. ಈ ಭಾವೈಕ್ಯತೆ ದೇಶದ ಇತರೆಡೆಗಳಿಂದ ಬಂದವರಲ್ಲಿ ಬೆರಗು ಮೂಡಿಸುತ್ತದೆ. ಆದರೆ ‘ಸಮನ್ವಯವೇ ನಮ್ಮ ಬಾಳ ಸೂತ್ರ’ ಎನ್ನುತ್ತಾರೆ ಸ್ಥಳೀಯರು.

ಯಾತ್ರೆಗೆ ಹೇಗೆ ಹೋಗಬಹುದು?

ಲೇಹ್ ತಲುಪಲು ಮೂರು ಮಾರ್ಗಗಳಿವೆ. ದೆಹಲಿಯಿಂದ ಲೇಹ್ ತಲುಪಿ ಮತ್ತೆ ದೆಹಲಿಗೆ ವಾಪಸಾಗಬಹುದು. ಜಮ್ಮುವಿನ ಮೂಲಕ ರಸ್ತೆ ಮಾರ್ಗದಲ್ಲಿ ಲೇಹ್ ತಲುಪಬಹುದು. ಚಂಡೀಗಢದಿಂದ ಹೊರಟು ಮನಾಲಿ ಮಾರ್ಗದ ಮೂಲಕ ಲೇಹ್ ತಲುಪುವುದು ಇನ್ನೊಂದು ಮಾರ್ಗ. ಹೆಚ್ಚಿನ ಮಾಹಿತಿಗಳಿಗಾಗಿ http://sindhudarshan.in ವೆಬ್​ಸೈಟ್​ಗೆ ಭೇಟಿ ನೀಡಬಹುದು. ಯಾತ್ರೆಯ ನೋಂದಣಿಕೇಂದ್ರಗಳು ದೆಹಲಿ, ಮುಂಬೈ, ಜಮ್ಮುವಿನಲ್ಲಿ ಕಾರ್ಯನಿರ್ವಹಿಸುತ್ತಿವೆ.

ನಮ್ಮತನದ ಅರಿವು

ಲಡಾಖ್ ನಮ್ಮ ದೇಶದ ಅವಿಭಾಜ್ಯ ಅಂಗ. ಆದರೆ, ಇಲ್ಲಿನವರನ್ನು ಭಾರತದ ಮುಖ್ಯವಾಹಿನಿಗೆ ಕರೆತರುವ, ‘ನಾವೂ ಭಾರತೀಯರು’ ಎಂಬ ಹೆಮ್ಮೆ ಮೂಡುವಂತೆ ಮಾಡುವ ಪ್ರಯತ್ನಗಳೇ ನಡೆದಿಲ್ಲ. ಅದರಲ್ಲೂ, ಋಗ್ವೇದದಲ್ಲಿ 176 ಬಾರಿ ಉಲ್ಲೇಖಿತವಾದ ಪುರಾತನ ಸಿಂಧೂ ನಾಗರಿಕತೆಯನ್ನು ಪೋಷಿಸಿದ ಸಿಂಧೂನದಿ ಹರಿಯುತ್ತಿರುವುದೇ ಈ ಲಡಾಖ್ ಭಾಗದಲ್ಲಿ. ಸಿಂಧೂ ನಾಗರಿಕತೆಯ ಶ್ರೇಷ್ಠ ಮೌಲ್ಯ, ಆ ನೆಲ ಸಾರಿದ ಚಿಂತನೆಗಳು, ನೀಡಿದ ಸಂದೇಶಗಳು, ನಾಗರಿಕತೆಯ ಉತ್ಥಾನ – ಇವೆಲ್ಲವನ್ನೂ ದೇಶದ ಪ್ರತಿ ನಾಗರಿಕನೂ ತಿಳಿದುಕೊಳ್ಳಲೇಬೇಕು. ಆಗ ಮಾತ್ರ ದೇಶದ ಭಾವಜಗತ್ತಿನೊಂದಿಗೆ ನಾವು ಒಂದಾಗಲು ಸಾಧ್ಯ. ಇಲ್ಲಿ ಮತ್ತೊಂದು ಅಂಶವೂ ಇದೆ. ಹಿಮಾಲಯ ನಮ್ಮ ಭೂಗಡಿಗಳನ್ನು ಕಾಯುತ್ತಿದ್ದು, ನಾವು ಆ ಹಿಮಾಲಯದ ರಕ್ಷಣೆಗೆ ಮುಂದಾಗಬೇಕಿದೆ. ಇವೆಲ್ಲದರ ಹಿನ್ನೆಲೆಯಲ್ಲಿ ‘ಸಿಂಧೂದರ್ಶನ ಉತ್ಸವ’ವನ್ನು ಆರಂಭಿಸಲಾಯಿತು. ಮೊದಲಿಗೆ, ಸ್ಪಂದನೆ ಸಾಧಾರಣವಾಗಿತ್ತಾದರೂ ಈಗ ಸಾವಿರಾರು ಜನರು ಯಾತ್ರೆಗೆ ಆಗಮಿಸುತ್ತಿದ್ದಾರೆ. ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿ ಸಂಸ್ಕೃತಿಯ ಕಂಪು ಪಸರಿಸುವ ಆಶಯ ನಮ್ಮದು.
| ತರುಣ್ ವಿಜಯ ರಾಜ್ಯಸಭಾ ಸದಸ್ಯರು, ವಿಜಯವಾಣಿ ಅಂಕಣಕಾರ

ಟ್ವಿಟರ್

*ಟ್ವಿಟರ್ ಬಳಕೆ ಸುಲಭ; ಅದರಿಂದ ಪ್ರಯೋಜನ ಪಡೆಯುವುದು ಹೇಗೆ?*
ಅವಿನಾಶ್ ಬಿ.

ಕಳೆದ ವಾರ ಟ್ವಿಟರ್‌ನಲ್ಲಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರು ತುಂಬಾ ಚರ್ಚೆಗೆ ಈಡಾದರು. ಇದಕ್ಕೆ ಕಾರಣ, ಬೆಂಗಳೂರಿನ ವ್ಯಕ್ತಿಯೊಬ್ಬರು ತನ್ನ ಫ್ರಿಜ್ ಸರಿ ಇಲ್ಲ, ಸ್ಯಾಮ್ಸಂಗ್ ಕಂಪನಿಯು ಅದನ್ನು ಬದಲಾಯಿಸಿಕೊಡುತ್ತಿಲ್ಲ ಎಂದು ವಿದೇಶಾಂಗ ಸಚಿವೆಯಲ್ಲಿ ದೂರಿಕೊಂಡಿದ್ದರು. ಇದಕ್ಕೆ ಸುಷ್ಮಾ ಅವರು ಪ್ರತಿಕ್ರಿಯಿಸಿದರಾದರೂ, ಸಾರ್ವಜನಿಕ ಜೀವನದಲ್ಲಿರುವವರಿಗೆ ಸಂಬಂಧಪಡದ ವಿಚಾರಗಳ ಬಗ್ಗೆ ದೂರು ನೀಡುವುದು ಸರಿಯೇ ಎಂಬ ಚರ್ಚೆಗೆ ಇದು ಕಾರಣವಾಯಿತು.

ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲವೀಗ ಪ್ರಭಾವೀ ಮಾಧ್ಯಮವಾಗಿ ಬೆಳೆಯುತ್ತಿದೆ. ಪ್ರಧಾನ ಮಂತ್ರಿ, ಕೇಂದ್ರ ಸಚಿವರು, ಮುಖ್ಯಮಂತ್ರಿ, ರಾಜ್ಯದ ಮಂತ್ರಿಗಳು, ಪೊಲೀಸ್ ಅಧಿಕಾರಿಗಳು, ಪೌರ ಸೇವಾ ಅಧಿಕಾರಿಗಳನ್ನು ಸುಲಭವಾಗಿ ತಲುಪುವ ಸಾಧನವೂ ಆಗಿ ಟ್ವಿಟರ್ ಬೆಳೆದಿದೆ. ವಿದೇಶಗಳಲ್ಲಿನ ಸಂಘರ್ಷದ ಸುಳಿಯಲ್ಲಿ ಸಿಕ್ಕ ಭಾರತೀಯರನ್ನು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲು ಕಾರಣವಾಗಿರುವುದು ಟ್ವಿಟರ್ ಮೂಲಕ ಸಲ್ಲಿಸಿದ ಮನವಿ. ಅಷ್ಟೇ ಅಲ್ಲದೆ, ರೈಲ್ವೇ ಅವ್ಯವಸ್ಥೆಗಳು, ಅನ್ಯಾಯಗಳ ಬಗ್ಗೆ ಕೇಂದ್ರ ಸಚಿವ ಸುರೇಶ್ ಪ್ರಭು ಅವರಿಗೆ ಟ್ವಿಟರ್ ಮೂಲಕ ನೀಡಿದ ದೂರುಗಳಿಗೆ ಕೂಡ ತಕ್ಷಣದ ಸ್ಪಂದನೆ ದೊರೆತಿದೆ. ಹೆಚ್ಚು ಸಕ್ರಿಯರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವಾಲಯವು ಕೂಡ ನಾಗರಿಕರ ದೂರಿಗೆ ಸ್ಪಂದಿಸಿ ಕಾರ್ಯಪ್ರವೃತ್ತವಾದ ಸಾಕಷ್ಟು ಉದಾಹರಣೆಗಳನ್ನು ನಾವು ಓದಿದ್ದೇವೆ. ಅದೇ ರೀತಿ, ದಿನ ನಿತ್ಯ ನಾವು ಬಳಸುವ ಬ್ಯಾಂಕು, ಟೆಲಿಫೋನ್, ವಾಹನ – ಹೀಗೆ ಹಲವಾರು ಸೇವೆಗಳ ಕಸ್ಟಮರ್ ಕೇರ್ ಖಾತೆಗಳೂ ತಕ್ಷಣ ಸ್ಪಂದಿಸುತ್ತವೆ. ಫೇಸ್‌ಬುಕ್‌ಗೆ ಹೋಲಿಸಿದರೆ, ಟ್ವಿಟರ್‌ನಲ್ಲಿ ಕನ್ನಡಿಗ ಬಳಕೆದಾರರು ಕಡಿಮೆ. ನಗರ ಕೇಂದ್ರಿತವಾಗಿದೆಯಾದರೂ, ಗ್ರಾಮೀಣ ಭಾಗದವರೂ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಹಿಂಜರಿಕೆ ಬೇಡ, ಬಳಕೆ ಸುಲಭ ಎಂದು ತಿಳಿಸಿಕೊಡುವುದು ಈ ಅಂಕಣದ ಉದ್ದೇಶ.

ಟ್ವಿಟರ್ ಬಗ್ಗೆ ಒಂದು ಮಾತು. ಇದು ಫೇಸ್‌ಬುಕ್‌ಗಿಂತ ಪ್ರಮುಖವಾಗಿ ಹೇಗೆ ಭಿನ್ನ ಎಂದರೆ, ಇಲ್ಲಿ ಒಬ್ಬರನ್ನು ನಾವು ಫ್ರೆಂಡ್ ಮಾಡಿಕೊಂಡರೆ (ಟ್ವಿಟರ್ ಭಾಷೆಯಲ್ಲಿ ಹೇಳಬಹುದಾದರೆ, ಫಾಲೋ ಮಾಡುವುದು), ಅವರು ಮಾಡಿದ ಪೋಸ್ಟ್‌ಗಳು ನಮಗೆ ಗೋಚರಿಸುತ್ತವೆ. ಆದರೆ, ನಮ್ಮ ಪೋಸ್ಟ್‌ಗಳು ಅವರಿಗೂ ಗೋಚರಿಸುವಂತಾಗಬೇಕಿದ್ದರೆ, ಅವರು ಕೂಡ ನಮ್ಮನ್ನು ಫಾಲೋ ಮಾಡಬೇಕು.

ಟ್ವಿಟರ್ ಖಾತೆಯನ್ನು ಯಾರು ಕೂಡ ತೆರೆಯಬಹುದು, ಇಮೇಲ್ ಖಾತೆ ತೆರೆದಷ್ಟೇ ಸುಲಭ. ಇದರಲ್ಲಿ ಟ್ವಿಟರ್ ಹ್ಯಾಂಡಲ್ ಎಂದರೆ ನಮ್ಮ ಐಡಿ ಇದ್ದಂತೆ. ಇಮೇಲ್ ಐಡಿ ರೀತಿಯಲ್ಲೇ, ಪೂರ್ತಿಯಾಗಿ ನಮ್ಮ ಹೆಸರು ಸಿಗುವುದು ಕಷ್ಟ. ಅದಕ್ಕೆ ಆಚೆ-ಈಚೆ ಏನಾದರೂ ಅಕ್ಷರ ಸೇರಿಸಬೇಕಾಗುತ್ತದೆ. ಉದಾಹರಣೆಗೆ, @avinash ಹೆಸರನ್ನು ಮೊದಲೇ ಬೇರೆಯವರು ನೋಂದಾಯಿಸಿದ್ದರಿಂದ, @AviTweetsVK ಅಂತ ಮಾಡಿಕೊಳ್ಳಬೇಕಾಯಿತು. ಇಲ್ಲಿ ಟ್ವಿಟರ್ ಐಡಿ ಬೇರೆಯೇ ಇರುತ್ತದೆ, ನಮ್ಮ ಹೆಸರು ಪೂರ್ತಿಯಾಗಿ ಪ್ರಕಟಿಸುವ ಜಾಗ ಬೇರೆಯೇ ಎಂಬುದು ನೆನಪಿರಲಿ. ಉದಾಹರಣೆಗೆ, ಹೆಸರಿನ ಜಾಗದಲ್ಲಿ Vijay Karnataka ಅಂತ ಇದ್ದು, ನಮ್ಮ ಟ್ವಿಟರ್ ಹ್ಯಾಂಡಲ್ @VKNewsNet ಅಂತ ಇದೆ.

ಪ್ರಯೋಜನಗಳು: ಫೇಸ್‌ಬುಕ್‌ಗೆ ಹೋಲಿಸಿದರೆ ಟ್ವಿಟರ್‌ನಲ್ಲಿರುವವರು ಹೆಚ್ಚು ಸುಶಿಕ್ಷಿತರು ಅಂತ ಸಂಶೋಧನೆಯೇ ಹೇಳಿದೆ. ಹೀಗಾಗಿ ಇಲ್ಲಿ ತೀರಾ ಖಾಸಗಿ ಗುಡ್ಮಾರ್ನಿಂಗ್, ಗುಡ್ ನೈಟ್ ಇತ್ಯಾದಿ ವಿಚಾರಗಳ ವಿನಿಮಯ ಕಡಿಮೆ.

ಮುಖ್ಯ ಪ್ರಯೋಜನಗಳೆಂದರೆ, ಡಿಜಿಟಲ್ ಇಂಡಿಯಾದ ಕನಸು ಹೊತ್ತಿರುವ ಸರಕಾರದೊಂದಿಗೆ ನೇರವಾಗಿ ಸಂಪರ್ಕದಲ್ಲಿರಬಹುದು. @PMOIndia ಎನ್ನುವ (Twitter.com/PMOIndia) ಖಾತೆಯನ್ನು ಫಾಲೋ ಮಾಡಿದರೆ, ಅದರಲ್ಲಿರುವ Following ಎಂಬಲ್ಲಿ ನೋಡಿದರೆ, ಬಹುತೇಕ ಕೇಂದ್ರ ಸಚಿವರು ನೇರ ಸಂಪರ್ಕಕ್ಕೆ ಸಿಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ @narendramodi ಎಂಬ ಟ್ವಿಟರ್ ಹ್ಯಾಂಡಲ್ ಹೊಂದಿದ್ದಾರೆ.

ಪ್ರಮುಖ ವಿದ್ಯಮಾನವನ್ನು, ಜನರಿಗೆ ಸಂಬಂಧಪಟ್ಟ ಕುಂದುಕೊರತೆಗಳನ್ನು ಅವರ ಗಮನಕ್ಕೆ ತರುವುದು ಹೇಗೆ? ಉದಾಹರಣೆಗೆ, ರೈಲಿನಲ್ಲಿ ಶೌಚಾಲಯ ಸ್ವಚ್ಛವಿಲ್ಲವೆಂದೋ, ಆಹಾರದಲ್ಲಿ ಹುಳವಿದೆಯೆಂದೋ, ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅದರ ಫೋಟೋ ಅಥವಾ ವೀಡಿಯೋ ತೆಗೆಯಿರಿ. ಆ ಬಗ್ಗೆ ಸಂಬಂಧಪಟ್ಟ ಸಚಿವರು (@sureshprabhu) ಅಥವಾ ರೈಲ್ವೇ ಸಚಿವಾಲಯಕ್ಕೋ (@RailMinIndia) ದೂರು ನೀಡಬೇಕಿದ್ದರೆ, “@RailMinIndia Kindly note” ಅಂತ ಶುರು ಮಾಡಿ, ಸಮಸ್ಯೆ ವಿವರಿಸಬಹುದು. ವೀಡಿಯೋ ಅಥವಾ ಫೋಟೋ ಕೂಡ ಅಪ್‍ಲೋಡ್ ಮಾಡಬಹುದು. ರಾಜ್ಯದಲ್ಲಿಯೂ ಮುಖ್ಯಮಂತ್ರಿಯಾದಿಯಾಗಿ (@CMofKarnataka) ಸಚಿವರು, ರಾಜ್ಯ ಮಟ್ಟದ ಅಧಿಕಾರಿಗಳು, ಸ್ಥಳೀಯಾಡಳಿತ ಅಧಿಕಾರಿಗಳು, ಸ್ಥಳೀಯ ಪೊಲೀಸರು ಕೂಡ ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದಾರೆ. ಅವರಲ್ಲಿಯೂ ನಮ್ಮ ಕುಂದುಕೊರತೆ ಹೇಳಿಕೊಳ್ಳಬಹುದು. ಬರೇ ಕುಂದುಕೊರತೆಯಲ್ಲ, ಆಡಳಿತ ಸುಧಾರಿಸಲು, ಜನರಿಗೆ ಸೌಕರ್ಯ ಒದಗಿಸಲು ಏನು ಮಾಡಬಹುದೆಂಬ ಸಲಹೆಯನ್ನೂ ನೀಡಬಹುದು. ಆದರೆ, ಯಾವುದೇ ಸಮಸ್ಯೆಯು ಆ ಮಟ್ಟಕ್ಕೆ ದೂರು ಕೊಡುವ ವಿಚಾರವೇ ಎಂಬುದನ್ನು ವಿವೇಚಿಸಿ ಮುಂದುವರಿಯಿರಿ.

ಫೇಕ್ ಖಾತೆಗಳ ಬಗ್ಗೆ ಎಚ್ಚರ: ಹೆಚ್ಚಿನ ಗಣ್ಯರ ಹೆಸರಿನಲ್ಲಿ ಒಂದೆರಡು ಕಾಗುಣಿತ ವ್ಯತ್ಯಾಸವಿರುವ ನಕಲಿ ಖಾತೆಗಳಿರುತ್ತವೆ. ಇದಕ್ಕಾಗಿಯೇ ಗಣ್ಯರಿಗಾಗಿ ದೃಢೀಕೃತ (ವೆರಿಫೈಡ್ ಬ್ಯಾಡ್ಜ್) ಖಾತೆ ನೀಡಲಾಗುತ್ತದೆ. ಅಂದರೆ, ಅವರ ಖಾತೆಯ ಹೆಸರಿನಲ್ಲಿ ನೀಲಿ ಬಣ್ಣದಲ್ಲಿ ಟಿಕ್ ಗುರುತೊಂದು ಕಾಣಿಸುತ್ತದೆ. ಅದನ್ನು ಗಮನಿಸಿ.

ಟೆಕ್ ಟಾನಿಕ್: WhatsApp ಟೈಪಿಂಗ್ ಸಮಸ್ಯೆಗೊಂದು ಪರಿಹಾರ

ವಾಟ್ಸ್ಆ್ಯಪ್ ಬಳಸುತ್ತಿರುವವರು ಮೊಬೈಲ್‌ನಲ್ಲಿ ಟೈಪ್ ಮಾಡುತ್ತಿರುವಾಗ ಮುಂದಿನ ಸಾಲಿಗೆ ಹೋಗಲು ಎಂಟರ್ ಎಂಬ ಅಡ್ಡಬಾಣ ಗುರುತಿನ ಕೀ ಬಟನ್ ಒತ್ತಿದಾಗಲೇ ಸಂದೇಶವು ಪೋಸ್ಟ್ ಆಗುತ್ತದೆ ಎಂಬುದು
ಹಲವರ ಗಮನಕ್ಕೆ ಬಂದಿರುವ ಒಂದು ಪುಟ್ಟ ಸಮಸ್ಯೆ. ಇದಕ್ಕೆ ಕಾರಣ ವಾಟ್ಸ್ಆ್ಯಪ್‌ನಲ್ಲಿರುವ ಒಂದು ಸೆಟ್ಟಿಂಗ್. ಪರಿಹರಿಸುವುದು ಹೇಗೆ? ಎಂಟರ್ ಕೊಟ್ಟಾಗ ಸಂದೇಶ ಕಳುಹಿಸಬೇಕು ಎಂಬ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದರಾಯಿತು. ಅದಕ್ಕಾಗಿ, ವಾಟ್ಸ್ಆ್ಯಪ್ ಸೆಟ್ಟಿಂಗ್ಸ್‌ನಲ್ಲಿ ಚಾಟ್ ಎಂಬಲ್ಲಿಗೆ ಹೋದರೆ, Enter is Send ಎಂಬ ಆಯ್ಕೆಯೊಂದಿರುತ್ತದೆ. ಅದರ ಮುಂದಿರುವ ಚೆಕ್ ಬಾಕ್ಸ್‌ನಲ್ಲಿ ಅನ್‌ಚೆಕ್ ಮಾಡಿಬಿಡಿ (ಸ್ಪರ್ಶಿಸಿದರಾಯಿತು). ಸಮಸ್ಯೆ ಪರಿಹಾರ.

ಹೊರೆಯಾಗದಿರಲಿ ಶಿಕ್ಷಣ!

image

ಮುಂದುವರಿಯುತ್ತಿರುವ ರಾಷ್ಟ್ರವಾಗಿ ಗುರುತಿಸಿಕೊಂಡಿರುವ ಭಾರತದ ಸಾಕ್ಷರತೆ ಪ್ರಮಾಣ ವಿದೇಶಗಳಿಗೆ ಹೋಲಿಸಿಕೊಂಡಲ್ಲಿ ಕಡಿಮೆಯೇ. ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ, ರಾಜ್ಯ ಸರ್ಕಾರಗಳು ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸುವತ್ತ ಗಮನ ಹರಿಸುವುದರ ಜತೆಗೆ ವಿದ್ಯಾರ್ಥಿಗಳ ಪ್ರತಿಭೆ, ಅರ್ಹತೆಗೆ ಅನುಸಾರವಾಗಿ ಅವರಿಗೆ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ಜಾರಿಗೊಳಿಸಿ ಅವರನ್ನು ಬಲಗೊಳಿಸಬೇಕೆಂಬ ಪ್ರಯತ್ನ ನಡೆಸುತ್ತಲೇ ಇದೆ. ಈ ನಿಟ್ಟಿನಲ್ಲಿ ಸ್ಕಾಲರ್​ಶಿಪ್ ಕುರಿತ ವಿವರ ಇಲ್ಲಿದೆ.

| ಭಾಗ್ಯ ಚಿಕ್ಕಣ್ಣ, ಬೆಂಗಳೂರು

ಶಿಕ್ಷಣ ಉದ್ಯಮವಾಗಿ ಬಹಳಷ್ಟು ಕಾಲವೇ ಆಗಿಹೋಗಿದೆ. ಒಂದು ಕಾಲದಲ್ಲಿ ಭಾರತೀಯ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ಉನ್ನತ ಮಟ್ಟದ ವ್ಯಾಸಂಗವನ್ನು ಪೂರೈಸಿಕೊಂಡುಬರುತ್ತಿದ್ದರು. ಆದರೆ, ಇಂದು ಕಾಲ ಬದಲಾಗಿದೆ. ಇತ್ತೀಚಿಗೆ ಅಸೋಚಾಮ್ ನೀಡಿದ ವರದಿಯ ಪ್ರಕಾರ, ಕಳೆದ ದಶಕದಿಂದೀಚೆಗೆ ಆ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಈಗ ಹೊರದೇಶಗಳಿಂದಲೇ ವಿದ್ಯಾರ್ಥಿಗಳು ನಮ್ಮತ್ತ ನೋಡುವ ಸ್ಥಿತಿ ನಿರ್ವಣವಾಗಿದೆ. ಹೀಗಿದ್ದೂ ಶಿಕ್ಷಣ ಎಲ್ಲರಿಗೂ ತಲುಪುತ್ತಿಲ್ಲ. ಇದರಿಂದಾಗಿಯೇ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸುವುದನ್ನು ಅರ್ಧಕ್ಕೇ ಕೈ ಬಿಡುವ ಪರಿಸ್ಥಿತಿಯೂ ಇದೆ. ಇದಕ್ಕೆ ಪ್ರಮುಖ ಕಾರಣ ಶಿಕ್ಷಣ ದುಬಾರಿಯಾಗುತ್ತಿರುವುದು. ಈ ನಿಟ್ಟಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸರ್ಕಾರಗಳು ವಿನೂತನ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಸಾಕಷ್ಟು ಪ್ರಯತ್ನ ನಡೆಸುತ್ತಿವೆ.

ಮನಸ್ಸಿದ್ದರೆ ಮಾರ್ಗ
ಜಾಗತಿಕವಾಗಿ ಭಾರತ ಮುಂದುವರಿಯುತ್ತಿರುವ ರಾಷ್ಟ್ರ ಎಂದು ಗುರುತಿಸಿಕೊಂಡಿದ್ದರೂ ಎಲ್ಲ ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣ ದೊರೆಯದೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿಯುವಂತೆ ಆಗಿದೆ. ದೇಶವನ್ನು ಕಾಡುತ್ತಿರುವ ಬಡತನ, ಅಜ್ಞಾನ ಹಾಗೂ ಭ್ರಷ್ಟಚಾರ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೆಂದರೆ ‘ಶಿಕ್ಷಣ’ ಮಾತ್ರ. ಈ ನಿಟ್ಟಿನಲ್ಲಿ ಗ್ರಾಮೀಣ ಹಾಗೂ ನಗರದ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಉನ್ನತ ಶಿಕ್ಷಣ ಪಡೆಯುವತ್ತ ಸಜ್ಜಾಗಬೇಕಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿವರ್ಷ ಶಿಕ್ಷಣ ಕ್ಷೇತ್ರಕ್ಕೆ ಸಾವಿರಾರು ಕೋಟಿ ವ್ಯಯಿಸುತ್ತಿದ್ದು, ಆರ್ಥಿಕವಾಗಿ ದುರ್ಬಲಗೊಂಡವರು, ಉನ್ನತ ವ್ಯಾಸಂಗದ ಕನಸು ಇಟ್ಟುಕೊಂಡಿರುವವರು, ದಲಿತರು ಹಾಗೂ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ಜಾರಿಗೊಳಿಸಿದೆ. ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯ, ಸೌಕರ್ಯಗಳನ್ನು ಅತ್ಯಂತ ಕಡಿಮೆ ಶುಲ್ಕಕ್ಕೆ ನೀಡಲಾಗುತ್ತಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಅವರ ಅಧ್ಯಯನಕ್ಕೆ ಪ್ರೋತ್ಸಾಹ ನೀಡುತ್ತಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವತ್ತ ನಮ್ಮ ವಿದ್ಯಾರ್ಥಿ ಸಮುದಾಯ ಯೋಚಿಸಬೇಕಿದೆ. ಇದೇ ನಿಟ್ಟಿನಲ್ಲಿ ಸ್ಪೂರ್ತಿ ಪಡೆದು ಕೆಲವು ಖಾಸಗಿ ಸಂಘ ಸಂಸ್ಥೆಗಳು ಕೂಡ ಪ್ರತಿಭಾವಂತ ವಿದ್ಯಾರ್ಥಿಗಳ ವ್ಯಾಸಂಗವನ್ನು ಉತ್ತೇಜಿಸಲು ವಿದ್ಯಾರ್ಥಿವೇತನಗಳನ್ನು ಕಾಲ ಕಾಲಕ್ಕೆ ನೀಡುತ್ತಲೇ ಬರುತ್ತಿವೆ. ಬಹುಶಃ ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಅಂತಹ ಕೆಲವು ವಿದ್ಯಾರ್ಥಿವೇತನಗಳ ಮಾಹಿತಿ ನಿಮಗಾಗಿ..

ಅಂಗವಿಕಲರಿಗೆ ವಿದ್ಯಾರ್ಥಿವೇತನ
ಅಂಗವೈಕಲ್ಯದ ಕುರಿತು ದೃಢೀಕರಣ ಪತ್ರ, ಪಾಸ್​ಪೋರ್ಟ್ ಅಳತೆಯ ಭಾವಚಿತ್ರ, ಶಿಕ್ಷಣ ಪಡೆಯುತ್ತಿರುವ ಶೈಕ್ಷಣಿಕ ಸಂಸ್ಥೆಯ ವಿಳಾಸ, ದೃಢೀಕರಣ ಪತ್ರದೊಂದಿಗೆ, ಶಾಲಾ-ಕಾಲೇಜು ಮುಖ್ಯಸ್ಥರ ದೃಢೀಕರಣದೊಂದಿಗೆ ಅರ್ಜಿಗಳನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಬೇಕು. ಇದಕ್ಕೆ ಯಾವುದೇ ಆದಾಯದ ಮಿತಿ ಇಲ್ಲ. ಹಾಗೂ ಎಲ್ಲ ವರ್ಗದ ಅಂಗವಿಕಲ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಬಹುದು.ಅರ್ಜಿ ಅವಧಿ : ಜೂನ್ – ಅಕ್ಟೋಬರ್. ಹೆಚ್ಚಿನ ಮಾಹಿತಿಗೆ- 080- 22860907 – ವೆಬ್​ಸೈಟ್ – welfareofdisabled.kar.nic.in

ವಿದ್ಯಾರ್ಥಿಗಳ ಗಮನಕ್ಕೆ
ಕೇವಲ ಆರ್ಥಿಕತೆಯ ದುರ್ಬಲತೆಯಿಂದಾಗಿ ಯುವಜನಾಂಗ ತಮ್ಮ ಶೈಕ್ಷಣಿಕ ಬದುಕಿನ ಕನಸುಗಳನ್ನು ಮೊಟಕುಗೊಳಿಸುವುದು ದೇಶದ ಬೆಳವಣಿಗೆಗೆ ಪೆಟ್ಟು ಕೊಟ್ಟಂತೆ. ಕೇಂದ್ರ, ರಾಜ್ಯ ಸರ್ಕಾರಗಳು ಸೇರಿದಂತೆ ಖಾಸಗಿ ಸಂಘ ಸಂಸ್ಥೆಗಳು ನೀಡುವ ವಿದ್ಯಾರ್ಥಿವೇತನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಸಮಾಜದ ನಿರ್ವಣಕ್ಕೆ ತಮ್ಮ ಸೇವೆಗಳನ್ನು ನೀಡುವತ್ತ ಯುವ ಸಮೂಹ ಚಿತ್ತ ಹರಿಸಬೇಕಿದೆ.

ಉನ್ನತ ಶಿಕ್ಷಣಕ್ಕೆ ಶುಲ್ಕ ಮರುಪಾವತಿ
ಎಸ್ಸೆಸ್ಸೆಲ್ಸಿ ನಂತರ ಉನ್ನತ ಶಿಕ್ಷಣ, ವೃತ್ತಿಶಿಕ್ಷಣ, ತಾಂತ್ರಿಕ ಶಿಕ್ಷಣ, ಸ್ನಾತಕೋತ್ತರ, ವೈದ್ಯಕೀಯ ಶಿಕ್ಷಣ ಪಡೆಯುವ ಅಂಗವಿಕಲರಿಗೆ ಪರೀಕ್ಷಾ ಶುಲ್ಕ, ಬೋಧನಾ, ಪ್ರಯೋಗಾಲಯ, ಕ್ರೀಡಾ ಹಾಗೂ ಗ್ರಂಥಾಲಯ ಶುಲ್ಕವನ್ನು ಮರುಪಾವತಿಸಲಾಗುತ್ತದೆ. ಸರ್ಕಾರಿ, ಖಾಸಗಿ, ಅನುದಾನರಹಿತ ಎಲ್ಲ ಕಾಲೇಜುಗಳಲ್ಲೂ ಅಂಗವಿಕಲರಿಗೆ ಪ್ರವೇಶವಿರಲಿದೆ. ಮಾಹಿತಿಗೆ : welfareofdisabled.kar.nic.in ಮಾಹಿತಿ ಸಲಹಾ ಕೇಂದ್ರ – 08022860907

ನ್ಯಾಷನಲ್ ಮೀನ್ಸ್ ಕಂ ಮೆರಿಟ್ ಸ್ಕಾಲರ್​ಶಿಪ್ ಸ್ಕೀಮ್ (NMMS)

8ನೇ ತರಗತಿಯಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನವೇ ಎನ್​ಎಂಎಂಎಸ್. ಇದರಲ್ಲಿ ಆರಂಭಿಕವಾಗಿ ಆಯ್ಕೆಗೆ ಪರೀಕ್ಷೆ ನಡೆಸಲಾಗುತ್ತದೆ. ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಿಂಗಳಿಗೆ 500ರ ಕಂತಿನಲ್ಲಿ ವರ್ಷಕ್ಕೆ 6ಸಾವಿರ ರೂ. ವಿದ್ಯಾರ್ಥಿವೇತನ ನೀಡುತ್ತದೆ.

ಹೆಚ್ಚಿನ ಮಾಹಿತಿಗೆ – http://www.dsert.kar.nic.in  ಅಧಿಸೂಚನೆ – bit.ly/1USCAbL

ನ್ಯಾಷನಲ್ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಷನ್ (NTSE)

ನವದೆಹಲಿಯ ಎನ್​ಸಿಆರ್​ಟಿ ಯು 10ನೇ ತರಗತಿ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರತಿಭಾನ್ವೇಷಣೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಪ್ರತಿವರ್ಷ ನಡೆಸುತ್ತದೆ. ಇದರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಿಯುಸಿಯಲ್ಲ
ಿ ತಿಂಗಳಿಗೆ ರೂ.1250, ಪದವಿ ಹಂತದಲ್ಲಿ 2,000 ಹಾಗೂ ಉನ್ನತ ವ್ಯಾಸಂಗದಲ್ಲಿ ವಿದ್ಯಾರ್ಥಿವೇತನವನ್ನು ಯುಜಿಸಿ ನಿಯಮಾನುಸಾರ ನೀಡುತ್ತದೆ. ಹೆಚ್ಚಿನ ಮಾಹಿತಿಗೆ – http://www.dsert.kar.nic.in  ಅಧಿಸೂಚನೆ – bit.ly/1USBg8z

ಧೀರುಬಾಯಿ ಅಂಬಾನಿ ವಿದ್ಯಾರ್ಥಿವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ ಮಾಹಿತಿಗೆ : http://www.kar.nic.in/pue
ಅಂಬೇಡ್ಕರ್ ನ್ಯಾಷನಲ್ ಮೆರಿಟ್ ಅವಾರ್ಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮಾಹಿತಿಗೆ: http://www.kar.nic.in/pue
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಾಹಿತಿಗೆ :www.kar.nic.in/pue
ಮೆರಿಟ್ ಸ್ಕಾಲರ್​ಶಿಪ್ – ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ (ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ ) ಶುಲ್ಕವನ್ನು ಸರ್ಕಾರ ನೀಡುತ್ತದೆ. ಮಾಹಿತಿಗೆ : http://www.kar.nic.in/pue
ಐ.ಟಿ ಕಂಪನಿ ವಿಪ್ರೋ ಅವರ ಅಜೀಮ್ ಪ್ರೇಮ್ೕ ಫೌಂಡೇಷನ್ ವಿದ್ಯಾರ್ಥಿವೇತನ ಮಾಹಿತಿಗೆ : http://www.azimpremjifoudation.org.
ಐಟಿ ಕಂಪನಿ ಇನ್ಪೋಸಿಸ್ ನೀಡುವ ವಿದ್ಯಾರ್ಥಿವೇತನ ಮಾಹಿತಿಗೆ : http://www.vidyaposhak.org
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿವೇತನ ಮಾಹಿತಿಗೆ : http://www.karepass.cgg.gov.in
ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮಾಹಿತಿಗೆ : http://www.sw.kar.nic.in
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಮಾಹಿತಿಗೆ : http://www.gokdom.kar.nic.in
ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿವೇತನ: ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಇನ್​ಸ್ಪೈರ್ ವಿದ್ಯಾರ್ಥಿವೇತನ ನೀಡುತ್ತಿದೆ. ದೇಶಾದ್ಯಂತ ಪ್ರತಿವರ್ಷ 10ಸಾವಿರ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಅರ್ಹ ಅಭ್ಯರ್ಥಿಗಳಿಗೆ 80ಸಾವಿರ ರೂ.ವರೆಗೂ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಮಾಹಿತಿಗೆ : http://www.kar.nic.in/pue
ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿವೇತನ: ಪ್ರತಿ ಜಿಲ್ಲೆಯಲ್ಲಿ ಪದವಿಪೂರ್ವ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಗಳಿಸಿರುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಹತ್ತು ಹೆಣ್ಣು ಮಕ್ಕಳಿಗೆ ವೃತ್ತಿ ಶಿಕ್ಷಣ ಪಡೆಯಲು ನೆರವು ನೀಡುತ್ತದೆ. ಮಾಹಿತಿಗೆ : http://www.kar.nic.in/pue
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲು, ಅವರಿಗೆ ಉನ್ನತ ವಿದ್ಯಾಭ್ಯಾಸ ಒದಗಿಸಲು ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸುಸಜ್ಜಿತ ವಿದ್ಯಾರ್ಥಿನಿಲಯಗಳು ಸರ್ಕಾರದ ಅಡಿಯಲ್ಲಿ ಕಾಲಕಾಲಕ್ಕೆ ರೂಪುಗೊಳ್ಳುತ್ತಲೇ ಇವೆ. ಪ್ರಸ್ತುತ ರಾಜ್ಯದಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಹಿಂದುಳಿದ ವರ್ಗ/ಅಲ್ಪಸಂಖ್ಯಾತರಿಗಾಗಿ 5ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕ/ಬಾಲಕಿಯರಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳು ಹಾಗೂ ಎಸ್ಸೆಸ್ಸೆಲ್ಸಿ ನಂತರದ ಕೋರ್ಸ್​ಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರಯೋಜನ ಪಡೆಯಬಹುದು. ಹೆಚ್ಚಿನ ಮಾಹಿತಿಗೆ -www.backwardclasses.kar.nic.in,- 080&-22374836. http://www.gokdom.kar.nic.in – 080-&22863618/17

ತಿಳಿದಿರಲಿ

ಶೈಕ್ಷಣಿಕ ವರ್ಷದ ಆರಂಭದಿಂದಲೂ ಸರ್ಕಾರಗಳ ಯೋಜನೆಗಳು ಜಾರಿಯಲ್ಲಿರುತ್ತವೆ. ಸಂಬಂಧಪಟ್ಟ ಇಲಾಖೆಗಳು ಕಾಲಕಾಲಕ್ಕೆ ಇದಕ್ಕಾಗಿ ಅರ್ಜಿ ಆಹ್ವಾನಿಸುತ್ತವೆ.
ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಹಂತವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಇದನ್ನು ಸದುಪಯೋಗಪಡಿಸಿಕೊಳ್ಳಬಹುದು.
ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದರೆ, ಜಾರಿಯಲ್ಲಿರುವ ವಿದ್ಯಾರ್ಥಿವೇತನಗಳ ಬಗ್ಗೆ ಬಡ, ದುರ್ಬಲ ವರ್ಗದವರಿಗೆ ತಿಳಿಸುವುದು.
ಬಹುತೇಕ ಎಲ್ಲ ಶೈಕ್ಷಣಿಕ ಯೋಜನೆಗಳು ವಿದ್ಯಾರ್ಥಿಯು ತೋರ್ಪಡಿಸಿದ ಸಾಮರ್ಥ್ಯದ ಮೇಲೆ ಲಭ್ಯವಾಗುತ್ತದೆಯೇ ವಿನಃ ಯಾರ ಪ್ರಭಾವದಿಂದಲೂ ನಡೆಯುವುದಿಲ್ಲ. ಹೀಗಾಗಿ ಕಠಿಣ ಪರಿಶ್ರಮ ಹಾಕಿ ಓದುವ ಮಕ್ಕಳಿಗೆ ಯೋಜನೆಗಳು ಖಂಡಿತವಾಗಿಯೂ ನೆರವಾಗಲಿದೆ. * ನಾಗರಿಕರು ತೆರುತ್ತಿರುವ ತೆರಿಗೆಯಿಂದಲೇ ಸರ್ಕಾರದ ಎಲ್ಲ ಯೋಜನೆಗಳಿಗೂ ಹಣ ಸಂದಾಯವಾಗುತ್ತಿದೆ. ಇದನ್ನು ಪಡೆಯಲು ಯಾವುದೇ ಹಿಂಜರಿಕೆ ಬೇಡ.

ಕ್ರಿಮಿನಿವಾರಕ ಮನೆಮದ್ದು

| ಡಾ. ವೆಂಕಟ್ರಮಣ ಹೆಗಡೆ

ಜಂತುಹುಳುವಿನ ಭಾದೆ ತಪ್ಪಿಸಲು ಮತ್ತಷ್ಟು ಮನೆಮದ್ದುಗಳ ಪರಿಚಯ ಇಲ್ಲಿವೆ.

ಬೆಳ್ಳುಳ್ಳಿ : 5-6 ಎಸಳು ಬೆಳ್ಳುಳ್ಳಿಯನ್ನು ಒಂದು ಲೋಟ ಹಾಲಿನಲ್ಲಿ ಕುದಿಸಿ ಸೇವಿಸಬೇಕು .

ಈರುಳ್ಳಿ : ಈರುಳ್ಳಿ ರಸವನ್ನು ಜೇನು ತುಪ್ಪದ ಜೊತೆ ಸೇವಿಸುದರಿಂದಲೂ ಕ್ರಿಮಿ ಬಾಧೆ ಕಡಿಮೆಯಾಗುತ್ತದೆ.

ನಿಂಬೆ ರಸ : ದಿನಕ್ಕೆ 3-4 ಬಾರಿ ನಿಂಬೆ ರಸವನ್ನು ಸೇವಿಸುತ್ತಾ ಬಂದರೆ ಕ್ರಿಮಿಬಾಧೆ ನಿವಾರಣೆಯಾಗುತ್ತದೆ.

ಹಾಗಲಕಾಯಿ : ದಿನನಿತ್ಯ 4-5 ಚಮಚ ಹಾಗಲಕಾಯಿ ರಸ ಮತ್ತು 1 ಲೋಟ ಮಜ್ಜಿಗೆಯನ್ನು ಖಾಲಿ ಹೊಟ್ಟೆಯಲ್ಲಿ ದಿನ ನಿತ್ಯ 7 ದಿನಗಳವರೆಗೆ ಸೇವಿಸಬೇಕು.

ಹಸಿ ತರಕಾರಿ ರಸಗಳು : ಸೌತೆಕಾಯಿ, ಬೀಟ್ರೂಟ್, ಕ್ಯಾರೆಟ್ ಸಿಹಿ ಕುಂಬಳಕಾಯಿ ಬೀಜಗಳನ್ನು ಪುಡಿ ಮಾಡಿ ಬಿಸಿ ನೀರಿಗೆ ಹಾಕಿ ಸೇವಿಸಬೇಕು.

ನೀರು:

ದಿನಕ್ಕೆ 3-5 ಲೀಟರ್ ವರೆಗೆ ಶುದ್ಧ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ’
ಯಾವುದೇ ತರಕಾರಿ ಹಣ್ಣುಗಳನ್ನು ಸೇವಿಸುವ ಮುನ್ನ ಅವುಗಳನ್ನು ಉಗುರುಬೆಚ್ಚಗಿನ ಉಪ್ಪು ನೀರಲ್ಲಿ ನೆನೆಸಿಟ್ಟು ನಂತರ ತೊಳೆದು ಬಳಸಬೇಕು.
ಆಡುಸೋಗೆ ಸೊಪ್ಪು:

ಈ ಸೊಪ್ಪಿನ ಹೂವುಗಳ ಕಷಾಯದ ಸೇವನೆಯಿಂದ ಕ್ರಿಮಿಬಾಧೆ ಕಡಿಮೆಯಾಗುತ್ತದೆ.
5-6 ದಿನಗಳು ಕೇವಲ ಹಣ್ಣು ತರಕಾರಿಗಳ ಸೇವನೆ ಹಾಗೂ ಏಳನೇ ದಿನ ಎನಿಮಾ ಚಿಕಿತ್ಸೆ (ಎನಿಮಾ ಚಿಕಿತ್ಸೆ: ಇದರಲ್ಲಿ ಗುದದ್ವಾರದಲ್ಲಿ ನಳಿಕೆಯ ಮುಖಾಂತರ ಶುದ್ಧವಾದ ಬೆಚ್ಚಗಿನ ಕುಡಿಯುವ ನೀರನ್ನು ಹರಿಸಿ , ಒಳಗಡೆ ಹಿಡಿದುಕೊಂಡು. ಕೆಲವು ಕ್ಷಣಗಳ ನಂತರ ತೆಳುವಾದ ಮಲವನ್ನು ದೇಹದಿಂದ ಹೊರ ಹಾಕುವಂತಹ ಸುಲಭ ಚಿಕಿತ್ಸೆ . ಮೊದಲು ತಜ್ಞರಿಂದ ಚಿಕಿತ್ಸೆ ಪಡೆದುಕೊಂಡು ನಂತರ ಸ್ವತಃ ಮನೆಯಲ್ಲಿಯೇ ಮಾಡಿಕೊಳ್ಳುವ ಚಿಕಿತ್ಸೆ.)
ವೈಯಕ್ತಿಕ ಸ್ವಚ್ಛತೆ :

ಬರಿಗಾಲಿನಲ್ಲಿ ಕೊಳಚೆ/ಕೆಸರು ಇರುವ ಜಾಗಗಳಲ್ಲಿ ಅಡ್ಡಾಡಬಾರದು, ಕೊಕ್ಕೆ ಹುಳುಗಳು ಚರ್ಮದ ಮೂಲಕ ದೇಹ ಸೇರುತ್ತವೆ.
ಶೌಚಾಲಯದ ಉಪಯೋಗದ ನಂತರ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು, ಮುಖ್ಯವಾಗಿ, ಆಹಾರ ತಯಾರಿಸುವವರು ಕೈ ಶುದ್ಧವಾಗಿಡಬೇಕು.
ಪ್ರತಿ ಬಾರಿ ಆಹಾರ ಸೇವನೆಯ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.
ಲವಂಗ ಕಷಾಯ : ಒಂದು ಲೋಟ ನೀರನ್ನು ಕುದಿಸಿ ಅದಕ್ಕೆ 10-15 ಲವಂಗಗಳನ್ನು ಹಾಕಿ ಅದನ್ನು 10 ನಿಮಿಷ ಮುಚ್ಚಿಟ್ಟು ನಂತರ ತಾಜಾ ಇರುವಾಗಲೇ ಸೇವಿಸಬೇಕು. ಒಂದು ವಾರ ಸೇವಿಸಿ.

ಕ್ಯಾರೆಟ್: ಬೆಳಿಗ್ಗೆ ಖಾಲಿ ಹೊಟ್ಟೆಗೆ ಚೆನ್ನಾಗಿ ತೊಳೆದು ತುರಿದಿರುವ ಗೆಜ್ಜರಿಗಳನ್ನು ಸೇವಿಸಿ .

ಅರಿಶಿಣ ಕೊಂಬು : ದಿನನಿತ್ಯ ಎರಡು ಬಾರಿ ಒಂದು ಲೋಟ ಹಾಲಿಗೆ ಒಂದು ಚಮಚ ಅರಿಶಿಣದ ಕೊಂಬಿನ ಪುಡಿಯನ್ನು ಹಾಕಿ ಸೇವಿಸಿ.

ಕೊನೇ ಹನಿ

ಪ್ರತಿದಿವಸ ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಬೂದುಗುಂಬಳಕಾಯಿ ರಸ ಕುಡಿಯುವುದರಿಂದ ಆಸಿಡಿಟಿ ಕಡಿಮೆಯಾಗುವುದು.

ಅಂತರರಾಷ್ಟ್ರೀಯ ಯೋಗ ದಿನಾಚರಣೆ.

ದೇಹ & ಮನಸಿನ ಅಂದ ಕಾಪಾಡುವ ಯೋಗ

ಯೋಗದಿಂದ ನೆಮ್ಮದಿ ಕಂಡುಕೊಂಡವರು ಬಹಳ. ಅನೇಕ ಸೆಲೆಬ್ರಿಟಿಗಳು ಯೋಗದ ಪ್ರಯೋಜನ ಪಡೆದುಕೊಂಡಿದ್ದಾರೆ. ಯೋಗದಿಂದ ನವಚೈತನ್ಯ ಪಡೆಯಲು ಸಾಧ್ಯ ಎಂದು ಅನುಭವದಿಂದ ಹೇಳುತ್ತಾರೆ. ಅಂಥ ಕೆಲವು ಪ್ರಖ್ಯಾತರ ಕುರಿತು ಪುಟ್ಟ ಮಾಹಿತಿ ಇಲ್ಲಿದೆ.

| ಬ್ಯಾಡನೂರು ಹರ್ಷವರ್ಧನ್

ಎಚ್. ಡಿ. ದೇವೇಗೌಡ

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ನಿರಂತರ ಚಟುವಟಿಕೆಯಲ್ಲಿರುತ್ತಾರೆ. ಈ ಇಳಿ ವಯಸ್ಸಿನಲ್ಲಿಯೂ ರಾಜಕೀಯ ಚದುರಂಗದ ದಾಳಗಳನ್ನು ಉರುಳಿಸುತ್ತಿರುತ್ತಾರೆ. ಅವರ ಈ ಉತ್ಸಾಹಕ್ಕೆ ಕಾರಣ ಯೋಗ. ಕಾರ್ತಿಕೇಯನ್ ಎಂಬವರು ಗೌಡರ ಯೋಗ ಗುರು. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಜಯಸರಸ್ವತಿ ಯೋಗ ಕೇಂದ್ರದಲ್ಲಿ ನಿತ್ಯವೂ ಯೋಗಾಭ್ಯಾಸ ನಡೆಸುವ ದೇವೇಗೌಡರು ವೀರಾಸನ, ತ್ರಿಕೋನಾಸನ, ಸರ್ವಾಂಗಾಸನ ಪ್ರಾಣಾಯಾಮ ಧ್ಯಾನವನ್ನು ತಪ್ಪದೇ ಮಾಡುತ್ತಾರೆ. ‘ನನಗೆ ಮಂಡಿ ನೋವು, ಬೆನ್ನು ನೋವು ಸಾಕಷ್ಟು ತೊಂದರೆ ನೀಡಿದ್ದವು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಯೋಗದ ಮೊರೆ ಹೋಗಿರುವುದಾಗಿ ಅವರು ಹೇಳುತ್ತಾರೆ.

ಬಿಪಾಶಾ ಬಸು

ಮತ್ತೊಬ್ಬ ಬಾಲಿವುಡ್ ಯೋಗಪಟುವೆಂದರೆ ಕೃಷ್ಣ ಸುಂದರಿ ಬಿಪಾಶಾ ಬಸು. ಇತ್ತೀಚೆಗಷ್ಟೆ ಸಪ್ತಪದಿ ತುಳಿದ ಈ ಮಾದಕ ಚೆಲುವೆ ಯೋಗದ ದೊಡ್ಡ ಫ್ಯಾನ್. ಅವರು ಒಂದೋ ಸಿನಿಮಾ ಮಾಡುತ್ತಿರುತ್ತಾರೆ ಅಥವಾ ಯೋಗ ಪ್ರಮೋಟ್ ಮಾಡುತ್ತಿರುತ್ತಾರೆ. 37ರ ಹರೆಯದಲ್ಲೂ ಬಿಪಾಶಾ ಸಖತ್ ಫಿಟ್ ಆಗಿರಲು ಕಾರಣ ಯೋಗ ಅಂತೆ. ಹೀಗಾಗಿಯೇ ಮಕ್ಕಳಲ್ಲಿ ಯೋಗ ಕುರಿತು ಅರಿವು ಮೂಡಿಸುವ ಇರಾದೆ ಅವರದು. ಯೋಗ ಉಪಯೋಗಗಳ ಕುರಿತು ಚಿಕ್ಕ ವಯಸ್ಸಿನಲ್ಲೆ ಗೊತ್ತಾದರೆ, ಆರೋಗ್ಯಕರವಾಗಿ ಬದುಕಬಹುದು ಎಂಬುದು ಅವರ ಅಭಿಪ್ರಾಯ.

ರಾಣಿ ಮುಖರ್ಜಿ

ಇತ್ತೀಚೆಗಷ್ಟೆ ಮುದ್ದಾದ ಮಗುವಿನ ತಾಯಿಯಾದ ಬಾಲಿವುಡ್ ನಟಿ ರಾಣಿ ಮುಖರ್ಜಿ ಸದ್ಯ ಚಿತ್ರರಂಗದಿಂದ ದೂರವಿರಬಹುದು. ಆದರೆ ಯೋಗಕ್ಕೆ ಮೊದಲಿನಿಂದಲು ಅವರು ಹತ್ತಿರ. ಇನ್ನು ‘ದಿಲ್ ಬೋಲೆ ಹಡಿಪ್ಪಾ’ ಚಿತ್ರಕ್ಕಾಗಿ ಸಣ್ಣಗಾಗಲು ಅವರು ಪ್ರತಿದಿನ 100 ಸೂರ್ಯ ನಮಸ್ಕಾರಗಳು ಹಾಗೂ 2,500ರಷ್ಟು ಕಪಾಲ್​ಭಾತಿ ಮಾಡುತ್ತಿದ್ದರಂತೆ. ಹಾಗೇ ‘ಮರ್ದಾನಿ’ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರಕ್ಕಾಗಿ ಸಿದ್ಧತೆ ಮಾಡಿಕೊಳ್ಳುವಾಗಲೂ ಅವರು ಪ್ರತಿದಿನ ಯೋಗ ಮಾಡುತ್ತಿದ್ದರಂತೆ.

ಮಲೈಕಾ ಅರೋರಾ

ಬಾಲಿವುಡ್ ‘ಐಟಂ ಕ್ವೀನ್’ ಮಲೈಕಾ ಅರೋರಾ ಅವರಿಗೀಗ 42 ವರ್ಷ. ಆದರೆ 20ರ ಹರೆಯದ ಸುಂದರಿಯರನ್ನೂ ನಾಚಿಸುವಂತ ಮೈಮಾಟ ಅವರದು. ಅದಕ್ಕೆ ಕಾರಣ ಯೋಗ. ಹೌದು, ಹಲವು ವರ್ಷಗಳಿಂದ ಯೋಗ ಮಾಡುತ್ತಿರುವ ಮಲೈಕಾ, ಅದಕ್ಕೆ ಕರೀನಾ ಅವರಿಗೆ ಧನ್ಯವಾದ ಹೇಳುತ್ತಾರೆ. ಯಾಕೆಂದರೆ ಯೋಗ ಕುರಿತು ಮಲೈಕಾ ಅವರಲ್ಲಿ ನಂಬಿಕೆ ಹುಟ್ಟಿಸಿದ್ದು ಕರೀನಾ ಅಂತೆ. ಮೂರು ವರ್ಷಗಳ ಹಿಂದೆ ಮಲೈಕಾ ಕೂಡ ಯೋಗ ಡಿವಿಡಿ ರಿಲೀಸ್ ಮಾಡಿದ್ದರು.

ಶಿಲ್ಪಾ ಶೆಟ್ಟಿ

ವಯಸ್ಸಾದಂತೆ ಅಂದ ಕಳೆದುಕೊಳ್ಳುವವರ ನಡುವೆ ನಟಿ ಶಿಲ್ಪಾ ಶೆಟ್ಟಿ ವಿಭಿನ್ನವಾಗಿ ನಿಲ್ಲುತ್ತಾರೆ. ಯಾಕೆಂದರೆ 41ರ ಈ ಬ್ಯೂಟಿಫುಲ್ ಮಮ್ಮಿ ವಯಸ್ಸಾದಂತೆ ಮತ್ತಷ್ಟು, ಮಗದಷ್ಟು ಸುಂದರವಾಗುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಯೋಗ ಅಂತ ಹೇಳಲು ಅವರು ಹಿಂಜರಿಯುವುದಿಲ್ಲ. ಹೌದು, ಸಾಮಾನ್ಯವಾಗಿ ಮಗುವಿಗೆ ಜನ್ಮ ನೀಡಿದ ಬಳಿಕ, ತಾಯಿಯರು ತೂಕ ಇಳಿಸಿಕೊಳ್ಳಲು ಮೂರ್ನಾಲ್ಕು ವರ್ಷ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ಶಿಲ್ಪಾ ಕೇವಲ 10 ತಿಂಗಳಲ್ಲಿ 20 ಕೆಜಿ ತೂಕ ಇಳಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ವಾರಕ್ಕೆ ಎರಡು ದಿನ ಯೋಗ ಹಾಗೂ ಧ್ಯಾನ ಮಾಡುವ ಶಿಲ್ಪಾ ಉಳಿದ ದಿನಗಳಲ್ಲಿ ಬೇರೆ ರೀತಿಯ ವರ್ಕೌಟ್ ಮಾಡುತ್ತಾರೆ. ಇನ್ನು ಇದುವರೆಗೆ 3 ಯೋಗ ಕುರಿತು ಡಿವಿಡಿಗಳನ್ನು ಬಿಡುಗಡೆ ಮಾಡಿರುವ ಶಿಲ್ಪಾ, ಭಾರತದಾದ್ಯಂತ ಹಲವು ಭಾಗಗಳಲ್ಲಿ ಯೋಗ ಕುರಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಅದರ ಉಪಯೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದಾರೆ.

ಇಲಿಯಾನಾ ಡಿಕ್ರೂಜ್

ಹಿಂದಿ, ತಮಿಳು, ತೆಲುಗು ಸೇರಿದಂತೆ ಕನ್ನಡದಲ್ಲೂ ಚಿತ್ರವೊಂದರಲ್ಲಿ ಹಾಡಿಗೆ ಸೊಂಟ ಬಳುಕಿಸಿರುವ ಬ್ಯೂಟಿ ಇಲಿಯಾನಾ ಡಿಕ್ರೂಜ್. ಇಂತಹ ಇಲಿಯಾನಾ ಅವರ ಸೌಂದರ್ಯದ ಗುಟ್ಟು ಯೋಗ ಅಂತೆ. ಹೀಗಾಗಿಯೇ ಆರೋಗ್ಯಕರ ದೇಹ ಹಾಗೂ ಮನಸಿಗೆ ಯೋಗ ಮಾಡಿ ಅಂತ ಕಿವಿಮಾತು ಹೇಳುತ್ತಾರೆ ಡಿಕ್ರೂಜ್.

ಲೆಬ್ರಾನ್ ಜೇಮ್್ಸ

ವೃತ್ತಿಜೀವನದ ಯಶಸ್ಸಿನ ಹಿಂದೆ ಯೋಗ ಸಾಕಷ್ಟು ಕೆಲಸಮಾಡಿದೆ ಎಂದು ಖ್ಯಾತ ಬಾಸ್ಕೆಟ್​ಬಾಲ್ ಆಟಗಾರ ಲೆಬ್ರಾನ್ ಜೇಮ್್ಸ ಹೇಳುತ್ತಾರೆ. ಉತ್ತಮ ಬಾಸ್ಕೆಟ್​ಬಾಲ್ ಆಟಗಾರನೊಬ್ಬನಿಗೆ ಕೇವಲ ಭುಜದ ಮೇಲೆ ಶಕ್ತಿ ಇದ್ದರಷ್ಟೆ ಸಾಲದು. ಮಾನಸಿಕ ಸ್ಥಿರತೆಗೆ ಯೋಗ ಕೂಡ ಅಗತ್ಯ. ಇದು ಗಾಯದ ಸಮಸ್ಯೆಯಿಂದ ಮುಕ್ತವಾಗಿರಿಸುವುದಲ್ಲದೆ, ಪ್ರದರ್ಶನದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಯೋಗ ಕೇವಲ ದೈಹಿಕ ಸಾಮರ್ಥ್ಯಕ್ಕಾಗಿ ಅಲ್ಲ, ತಾಂತ್ರಿಕ ಕೌಶಲದ ದೃಷ್ಟಿಯಿಂದ ಸಹಕಾರಿಯಾಗಿದೆ. ಕೆಲವರ್ಷಗಳ ಹಿಂದೆ ಬೆನ್ನು ನೋವಿನಿಂದ ಬಳಲುತ್ತಿದ್ದ ನಾನು ಯೋಗ ಅಭ್ಯಾಸ ಶುರು ಮಾಡಿದೆ. ಅಂದು ಶುರುವಾದ ಯೋಗಾಭ್ಯಾಸ ಇಂದಿನವರೆಗೂ ಮುಂದುವರಿದಿದೆ.

ಅಲೆಕ್ ಬಾಲ್ಡ್​ವಿನ್

ಆಸ್ಕರ್ ವಿಜೇತ ಹಾಲಿವುಡ್ ನಟ 58 ವರ್ಷದ ಅಲೆಕ್ ಬಾಲ್ಡ್​ವಿನ್ ಕೂಡ ಯೋಗಪ್ರೇಮಿ. 2012ರಲ್ಲಿ ಹಿಲೇರಿಯಾ ಥಾಮಸ್ ಅವರನ್ನು ಮದುವೆಯಾದ ಬಳಿಕ ಅಲೆಕ್ ಯೋಗದತ್ತ ಗಮನ ಹರಿಸಿದರಂತೆ. ಕಾರಣ ಪತ್ನಿ ಹಿಲೇರಿಯಾ ಅವರೇ ಖುದ್ದು ಯೋಗ ಟ್ರೇನರ್. ಕಳೆದ 3-4 ವರ್ಷಗಳಿಂದ ಯೋಗ ಪ್ರ್ಯಾಕ್ಟೀಸ್ ಮಾಡುತ್ತಿರುವ ಅವರು ಅದರಿಂದ ತುಂಬ ಪ್ರಭಾವಕ್ಕೊಳಗಾಗಿದ್ದಾರೆ. ಪತ್ನಿಯೊಂದಿಗೆ ಯೋಗ ಡಿವಿಡಿಯನ್ನು ಹೊರತಂದಿರುವ ಅಲೆಕ್, ಪತ್ನಿಗೆ ಧನ್ಯವಾದ ಹೇಳುತ್ತಾರೆ. ‘ದೇಹ ತೂಕ ಕಡಿಮೆ ಮಾಡಿಕೊಳ್ಳಲು ಹಾಗೂ ಆರೋಗ್ಯ ಉತ್ತಮವಾಗಿ, ನವಚೈತನ್ಯ ತುಂಬಿಕೊಳ್ಳಲು ಯೋಗದಿಂದ ತುಂಬ ಸಹಾಯವಾಯಿತು’ ಎಂದು ಅಲೆಕ್ ಹೇಳಿಕೊಂಡಿದ್ದಾರೆ.

ಬ್ರಿಟ್ನಿ ಸ್ಪಿಯರ್ಸ್

ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಕಳೆದ ಮೂರು ವರ್ಷಗಳಿಂದ ಯೋಗಕ್ಕೆ ಅಡಿಕ್ಟ್ ಆಗಿದ್ದಾರಂತೆ. ‘ಒಳ್ಳೆ ಯೋಗ ತರಬೇತುದಾರರು ಸಿಕ್ಕರೆ, ನೀವು ನಿಮ್ಮ ದೇಹಾರೋಗ್ಯವನ್ನು ಅದ್ಭುತವಾಗಿ ಕಾಪಾಡಿಕೊಳ್ಳಬ
ಹುದು. ನನಗಂತೂ ಯೋಗದಿಂದ ತುಂಬ ಸಹಾಯವಾಗಿದೆ. ನಾನು ಯೋಗವನ್ನು ಪ್ರೀತಿಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ ಬ್ರಿಟ್ನಿ.

ರಸೆಲ್ ಬ್ರ್ಯಾಂಡ್

ಹಾಲಿವುಡ್ ನಟ, ಸಾಮಾಜಿಕ ಹೋರಾಟಗಾರ ರಸೆಲ್ ಬ್ರ್ಯಾಂಡ್ ತಮ್ಮ 14ನೇ ವಯಸ್ಸಿನಿಂದಲೆ ಮಾದಕ ವ್ಯಸನಿಯಾಗಿದ್ದವರು, ಮದ್ಯಪಾನಕ್ಕೆ ದಾಸನಾಗಿದ್ದವರು. ಆದರೆ 41 ವರ್ಷದ ರಸೆಲ್ ಕಳೆದ 11 ವರ್ಷಗಳಿಂದ ಅವೆಲ್ಲದರಿಂದ ದೂರಾಗಿದ್ದಾರೆ. ಕಾರಣ ಯೋಗ, ಧ್ಯಾನ ಹಾಗೂ ಆಧ್ಯಾತ್ಮ. ಹಿಂದುತ್ವದ ಅನುಯಾಯಿಯಾಗಿರುವ ರಸೆಲ್ ತಾವೇ ಖುದ್ದಾಗಿ ಯೋಗ ಹೇಳಿಕೊಡುತ್ತಾರೆ ಕೂಡ. ಜತೆಗೆ ತಮ್ಮಂತೆಯೆ ಮಾದಕ ವ್ಯಸನಿಯಾದವರಿಗೆ, ಅದನ್ನು ತೊರೆಯಲು ಸಹಾಯ ಕೂಡ ಮಾಡುತ್ತಾರೆ. ಇವರು ಮಾತ್ರವಲ್ಲ ಲೇಡಿ ಗಾಗಾ, ಮೆಡೊನ್ನಾ, ಜಾನ್ ಬಾನ್ ಜೋವಿ, ರಸೆಲ್ ಸಿಮ್ಮನ್ಸ್, ಕೇಟಿ ಪೆರ್ರಿ, ಜುಲಿಯನ್ ಮೂರ್, ನಿಕೋಲ್ ಶೆರ್ಜಿಂಗರ್, ಅಡಮ್ ಲೆವಿನ್, ಬಿಯಾನ್ಸಿ ನೌಲ್ಸ್, ಕಾರ್ಮನ್ ಎಲೆಕ್ಟ್ರಾ, ಈವಾ ಲಾಂಗೊರಿಯಾ, ಜೆಸ್ಸಿಕಾ ಆಲ್ಬಾ, ಹೀಡಿ ಕ್ಲಮ್ ಹಿಲರಿ ಡಫ್, ಜೆನ್ನಿ ಮೆಕಾರ್ಥಿ, ಕಿಮ್ ಕರ್ದಾಶಿಯಾನ್, ರೀಸ್ ವಿದರ್​ಸ್ಪೂನ್, ಕೇಟ್ ಹಡ್ಸನ್, ಜೆಸ್ಸಿಕಾ ಬೀಲ್, ಮ್ಯಾಥ್ಯೂ ಮೆಕನೋ, ಮಿಕ್ ಜ್ಯಾಗರ್, ಗ್ವಿನಿತ್ ಪೇಲ್ಟ್ರೌ, ಮಿಲಿ ಸೈರಸ್, ಒರ್ಲಾಂಡೋ ಬ್ಲೂಮ್ ಮಿರಾಂಡಾ ಕೆರ್, ರಾಬರ್ಟ್ ಡೌನಿ ಜೂನಿಯರ್, ನವೋಮಿ ಕ್ಯಾಂಪ್​ಬೆಲ್, ರಿಕಿ ಮಾರ್ಟಿನ್, ಟೋರಿ ಸ್ಪೆಲ್ಲಿನ್, ವುಡಿ ಹ್ಯಾರೆಲ್ಸನ್ ಸೇರಿದಂತೆ ಇನ್ನೂ ಹಲವಾರು ಮಂದಿ ಹಾಲಿವುಡ್ ಸ್ಟಾರ್​ಗಳು, ಸೂಪರ್ ಮಾಡೆಲ್​ಗಳು, ಪಾಪ್ ಗಾಯಕರು ಯೋಗ ಸಾಧನೆ ಮಾಡುತ್ತಾರೆ.

ಜೂಲಿಯಾ ರಾಬರ್ಟ್ಸ್

ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರಿಂದ ಪ್ರೇರೇಪಣೆಗೊಂಡು ಹಿಂದು ಧರ್ಮಕ್ಕೆ ಮತಾಂತರವಾಗಿರುವ ಆಸ್ಕರ್ ವಿಜೇತ ಹಾಲಿವುಡ್ ನಟಿ ಜೂಲಿಯಾ ರಾಬರ್ಟ್ಸ್ ಕೂಡ ಯೋಗ ಅನುಯಾಯಿ. ಪತಂಜಲಿ ಅಷ್ಟಾಂಗಯೋಗದ ಭಾಗವಾದ ಪ್ರತ್ಯಾಹಾರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಜೂಲಿಯಾ ವರ್ಷಕ್ಕೊಮ್ಮೆಯಾದರೂ ಭಾರತಕ್ಕೆ ಬರುವುದನ್ನು ರೂಢಿಸಿಕೊಂಡಿದ್ದಾರೆ. ಆಧ್ಯಾತ್ಮ, ಯೋಗ, ಧ್ಯಾನಗಳು ಅವರು ಹಾಗೂ ಅವರ ಕುಟುಂಬದವರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿವೆಯಂತೆ.

ದೀಪಿಕಾ ಪಡುಕೋಣೆ

ಕೆಲಸದ ಒತ್ತಡ ಮತ್ತು ದೇಹಾರೋಗ್ಯ ಕಾಪಾಡಿಕೊಳ್ಳಲು ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಕೂಡ ಯೋಗ ಮಾಡುತ್ತಾರಂತೆ. ಅದರಿಂದ ತುಂಬ ಉಪ ಯೋಗಗಳಾಗಿವೆ ಎಂದು ಹೇಳಿಕೊಂಡಿದ್ದಾರವರು.

ನರ್ಗಿಸ್ ಫಾಕ್ರಿ

ನರ್ಗಿಸ್ ಫಾಕ್ರಿಯನ್ನು ನೋಡಿದರೆ ಅವರಿಗೆ 36 ವರ್ಷವಾಗಿದೆ ಅಂತ ಹೇಳಲು ಸಾಧ್ಯವಾ? ಖಂಡಿತ ಇಲ್ಲ. ಆದರೆ ಯೋಗ ಮೂಲಕ ಅಷ್ಟರ ಮಟ್ಟಿಗೆ ಮಾನಸಿಕ ಹಾಗೂ ದೈಹಿಕ ಸೌಂದರ್ಯಗಳನ್ನು ಕಾಪಾಡಿ ಕೊಂಡಿದ್ದಾರೆ ನರ್ಗಿಸ್.

ಲಾರಾ ದತ್ತಾ

‘ಕೆಲಸದ ಒತ್ತಡ, ದೇಹಾರೋಗ್ಯ ಕಾಪಾಡಿಕೊಳ್ಳಲು ಕೇವಲ ಕ್ಯಾಲರಿಗಳನ್ನು ಬರ್ನ್ ಮಾಡಿದರೆ ಸಾಲದು. ನನಗೂ ಹಾಗೇ ಅನ್ನಿಸಿತು. ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಲು ಬೇರೇನಾದರೂ ಬೇಕು ಅಂತನ್ನಿಸಿತು. ಆಗ ಯೋಗಾಭ್ಯಾಸ ಪ್ರಾರಂಭಿಸಿದೆ. ಜೀವನದ ಪ್ರತಿ ಹಂತದಲ್ಲೂ ನನಗೆ ಯೋಗದಿಂದ ಸಹಾಯವಾಗಿದೆ’ ಎಂದು ಹೇಳಿಕೊಳ್ಳುತ್ತಾರೆ ಬಾಲಿವುಡ್ ನಟಿ ಲಾರಾ ದತ್ತಾ. ಬಿಕೆಎಸ್ ಅಯ್ಯಂಗಾರ್ ಯೋಗ ಹಾಗೂ ಅಷ್ಟಾಂಗ ಯೋಗಗಳನ್ನು ಮಾಡುವ ಲಾರಾ, ಯೋಗ ಉಪಯೋಗಗಳ ಕುರಿತು ವೀಡಿಯೋಗಳನ್ನು ಮಾಡಿ ಯೂಟ್ಯೂಬ್​ಗೆ ಅಪ್​ಲೋಡ್ ಮಾಡುತ್ತಿರುತ್ತಾರೆ.

ಜಾಕ್ವೆಲಿನ್ ಫರ್ನಾಂಡಿಸ್

ಮಿಸ್ ಶ್ರೀಲಂಕಾ ಕಿರೀಟ ಮುಡಿಗೇರಿಸಿಕೊಂಡು ಸದ್ಯ ಬಾಲಿವುಡ್​ನಲ್ಲಿ ಸಖತ್ ಬಿಜಿಯಾಗಿರುವ ಬ್ಯೂಟಿ ಜಾಕ್​ಲೀನ್ ಕೂಡ ತಮ್ಮನ್ನು ತಾವು ‘ಯೋಗ ಕ್ವೀನ್’ ಎಂದು ಹೊಗಳಿಕೊಳ್ಳುತ್ತಾರೆ. ಕಾರಣ ಅವರು ವಾರದಲ್ಲಿ ಐದು ದಿನಗಳ ಕಾಲ ಒಂದೊಂದು ತಾಸು ಯೋಗ ಮಾಡುತ್ತಾರಂತೆ. ‘ನಾನು ಕೇವಲ ಸೂರ್ಯ ನಮಸ್ಕಾರಕ್ಕೆ ಸೀಮಿತವಾಗಿಲ್ಲ. ಬದಲಾಗಿ ಹೊಸ ಹೊಸ ಆಸನಗಳನ್ನು ಮಾಡುತ್ತಿರುತ್ತೇನೆ’ ಎಂದು ಹೇಳಿಕೊಂಡಿ ದ್ದಾರೆ ಜಾಕ್​ಲೀನ್.

ಕರೀನಾ ಕಪೂರ್

‘ಕೆಲಸದ ಒತ್ತಡ, ದೇಹಾರೋಗ್ಯ ಕಾಪಾಡಿಕೊಳ್ಳಲು ಕೇವಲ ಕ್ಯಾಲರಿಗಳನ್ನು ಬರ್ನ್ ಮಾಡಿದರೆ ಸಾಲದು. ನನಗೂ ಹಾಗೇ ಅನ್ನಿಸಿತು. ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಲು ಬೇರೇನಾದರೂ ಬೇಕು ಅಂತನ್ನಿಸಿತು. ಆಗ ಯೋಗಾಭ್ಯಾಸ ಪ್ರಾರಂಭಿಸಿದೆ. ಜೀವನದ ಪ್ರತಿ ಹಂತದಲ್ಲೂ ನನಗೆ ಯೋಗದಿಂದ ಸಹಾಯವಾಗಿದೆ’ ಎಂದು ಹೇಳಿಕೊಳ್ಳುತ್ತಾರೆ ಬಾಲಿವುಡ್ ನಟಿ ಲಾರಾ ದತ್ತಾ. ಬಿಕೆಎಸ್ ಅಯ್ಯಂಗಾರ್ ಯೋಗ ಹಾಗೂ ಅಷ್ಟಾಂಗ ಯೋಗಗಳನ್ನು ಮಾಡುವ ಲಾರಾ, ಯೋಗ ಉಪಯೋಗಗಳ ಕುರಿತು ವೀಡಿಯೋಗಳನ್ನು ಮಾಡಿ ಯೂಟ್ಯೂಬ್​ಗೆ ಅಪ್​ಲೋಡ್ ಮಾಡುತ್ತಿರುತ್ತಾರೆ.

ಜಾಕ್ವೆಲಿನ್ ಫರ್ನಾಂಡಿಸ್

ಮಿಸ್ ಶ್ರೀಲಂಕಾ ಕಿರೀಟ ಮುಡಿಗೇರಿಸಿಕೊಂಡು ಸದ್ಯ ಬಾಲಿವುಡ್​ನಲ್ಲಿ ಸಖತ್ ಬಿಜಿಯಾಗಿರುವ ಬ್ಯೂಟಿ ಜಾಕ್​ಲೀನ್ ಕೂಡ ತಮ್ಮನ್ನು ತಾವು ‘ಯೋಗ ಕ್ವೀನ್’ ಎಂದು ಹೊಗಳಿಕೊಳ್ಳುತ್ತಾರೆ. ಕಾರಣ ಅವರು ವಾರದಲ್ಲಿ ಐದು ದಿನಗಳ ಕಾಲ ಒಂದೊಂದು ತಾಸು ಯೋಗ ಮಾಡುತ್ತಾರಂತೆ. ‘ನಾನು ಕೇವಲ ಸೂರ್ಯ ನಮಸ್ಕಾರಕ್ಕೆ ಸೀಮಿತವಾಗಿಲ್ಲ. ಬದಲಾಗಿ ಹೊಸ ಹೊಸ ಆಸನಗಳನ್ನು ಮಾಡುತ್ತಿರುತ್ತೇನೆ’ ಎಂದು ಹೇಳಿಕೊಂಡಿ ದ್ದಾರೆ ಜಾಕ್​ಲೀನ್.

ಕರೀನಾ ಕಪೂರ್

ಕರೀನಾ ಕಪೂರ್ ಅವರ ಪರ್ಫೆಕ್ಟ್ ಫಿಗರ್​ಗೆ ಕಾರಣವೇನು ಗೊತ್ತಾ? ಸೂರ್ಯನಮಸ್ಕಾರ! ಹೌದು, ಹಾಗಂತ ಖುದ್ದು ಕರೀನಾ ಅವರೇ ಹೇಳಿಕೊಂಡಿದ್ದಾರೆ. ‘ನಾನು ಸಂಪೂರ್ಣವಾಗಿ ನನ್ನನ್ನು ಯೋಗದಲ್ಲಿ ತೊಡಗಿಸಿಕೊಂಡಿದ್ದೇನೆ. ಯೋಗ ನನ್ನ ಜೀವನವನ್ನೆ ಬದಲಿಸಿದೆ ಅಂತನ್ನಿಸುತ್ತೆ. ಪ್ರತಿದಿನ 90 ನಿಮಿಷಗಳ ಕಾಲ ಪವರ್ ಯೋಗ ಮತ್ತು ಸೂರ್ಯ ನಮಸ್ಕಾರ ಮಾಡುತ್ತೇನೆ. ನಾನಿಷ್ಟು ಎನರ್ಜಿಯಿಂದ ಇರಲು ಅದೇ ಕಾರಣ’ ಎನ್ನುತ್ತಾರೆ ಕರೀನಾ ಕಪೂರ್ ಖಾನ್.

ವಿರಾಟ್ ಕೊಹ್ಲಿ

ಯೋಗದಿಂದ ಆತ್ವವಿಶ್ವಾಸದ ಜತೆಗೆ ಆಕ್ರಮಣಕಾರಿ ಮನೋಭಾವ ಬೆಳೆಸಿಕೊಳ್ಳಲು ಸಹಾಯವಾಯಿತು ಎನ್ನುತ್ತಾರೆ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ. 2015ರ ಏಕದಿನ ವಿಶ್ವಕಪ್ ಟೂರ್ನಿ ವೇಳೆ ಮೊದಲ ಬಾರಿಗೆ ಯೋಗ ಅಭ್ಯಾಸ ಮಾಡಿದೆ. ಶಿಸ್ತುಬದ್ಧತೆ ಹಾಗೂ ಸ್ಪರ್ಧಾತ್ಮಕತೆ ವೃದ್ಧಿಸಿಕೊಂಡೆ, ಒತ್ತಡದಲ್ಲಿದ್ದಾಗ ಮೈದಾನದಲ್ಲಿ ಆಕ್ರಮಣಕಾರಿ ಪ್ರದರ್ಶನ ತೋರಲು ಹಾಗೂ
ಆಟದಲ್ಲಿ ಸಮತೋಲನ ದೃಷ್ಟಿ ಹರಿಸಲು ಇದರಿಂದ ಸಹಾಯವಾಗುತ್ತದೆ ಎನ್ನುವುದು ಅವರ ಅನುಭವ. ಜೂನ್ 21 ರಂದು ನಡೆಯಲಿರುವ ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಕೊಹ್ಲಿ, ಯೋಗದಿಂದಾಗುವ ಪ್ರಯೋಜನವನ್ನು ಹೇಳಿಕೊಂಡಿದ್ದಾರೆ. ಭಾರತ ಟೆಸ್ಟ್ ತಂಡದ ನಾಯಕನಾಗಿರುವ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಆರಂಭಕ್ಕೂ ಮುನ್ನ ಯೋಗ ಅಭ್ಯಾಸ ಮಾಡುವುದನ್ನು ಕಡ್ಡಾಯಗೊಳಿಸಬೇಕು ಎನ್ನುವ ಮನವಿಯನ್ನೂ ಮಾಡಿದ್ದಾರೆ.

‘ಫ್ರೆಂಡ್ಸ್ ಜತೆ ಓತ್ಲಾ ಹೊಡೀತಾ ಓಡಾಡಿಕೊಂಡಿರುವುದು ಮಾತ್ರ ಜೀವನವಲ್ಲ. ಮತ್ತಷ್ಟು ಶಿಸ್ತು ಮೈಗೂಡಿಸಿಕೊಳ್ಳಬೇಕು ಅಂತನ್ನಿಸಿ, ಮೂರೂವರೆ ವರ್ಷಗಳ ಹಿಂದೆ ಯೋಗ ಪ್ರಾರಂಭಿಸಿದೆ. ವಯಸ್ಸು ಇರುವಾಗಲೇ ಶಕ್ತಿಯನ್ನು ಸರಿಯಾದ ದಾರಿಯಲ್ಲಿ ಉಪಯೋಗಿಸಿ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂಬುದು ಅರ್ಥವಾಯ್ತು. ಪ್ರತಿ ವಾರ ಐದರಿಂದ ಆರು ದಿನ, ಎರಡರಿಂದ ಎರಡೂವರೆ ತಾಸುಗಳ ಕಾಲ ಯೋಗ ಮಾಡುತ್ತೇನೆ. ‘ನೀವೂ ಯೋಗ ಮಾಡಿ ನಿಮ್ಮ ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಿ’.

| ಸಂಜನಾ ಗಲ್ರಾನಿ

ಎರಡು ವರ್ಷಗಳಿಂದ ಯೋಗ, ಧ್ಯಾನ ಮಾಡುತ್ತಿದ್ದೇನೆ. ಆರ್ಟ್ ಆಫ್ ಲಿವಿಂಗ್​ನಲ್ಲಿ ಅವುಗಳನ್ನು ಕಲಿತೆ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಫ್ರೆಶ್ ಆಗಿ ಹತ್ತು ನಿಮಿಷಗಳ ಕಾಲ ನಾನು ವಜ್ರಾಸನ, ಶವಾಸನ ಸೇರಿದಂತೆ ಹಲವು ಆಸನಗಳಲ್ಲಿ ಕೆಲ ಕ್ರಿಯೆಗಳನ್ನು ಮಾಡುತ್ತೇನೆ. ಅದರಿಂದ ಕೆಲ ಉತ್ತಮ ಬದಲಾವಣೆಗಳಾಗಿವೆ. ತ್ವಚೆ ಕಾಂತಿಯುಕ್ತವಾಗಿದೆ, ದೇಹದಲ್ಲಿನ ಕೆಟ್ಟ ರಾಸಾಯನಿಕಗಳು ಇಲ್ಲವಾಗಿವೆ. ಮನಸ್ಸಿಗೆ ಶಾಂತಿ ಸಿಗುತ್ತೆ. ಯೋಗ ಮಾಡಿದ ನಂತರ ಹತ್ತು ನಿಮಿಷ ಧ್ಯಾನಕ್ಕೆ ಕುಳಿತುಬಿಟ್ಟರೆ ಬೇರೆ ಲೋಕಕ್ಕೆ ಹೋಗಿಬಿಡುತ್ತೇವೆ.

| ಹರ್ಷಿಕಾ ಪೂಣಚ್ಚ
ಜೀವನ ವಿಕಾಸವೇ ಯೋಗ
BY ವಿಜಯವಾಣಿ ಸುದ್ದಿಜಾಲ · JUN 21, 2016

ಯೋಗವೆಂದರೆ ಅದು ವಯೋವೃದ್ಧರಿಗೆ ಸೀಮಿತ ಎಂಬ ಭಾವನೆ ಇದೆ. ಆದರೆ, ಯೋಗ ಜೀವನ ಶೈಲಿ ಎಂಬುದು ಅನೇಕರಿಗೆ ತಿಳಿದಿಲ್ಲ. ಆದರೆ, ಇತ್ತೀಚೆಗೆ ಮಕ್ಕಳು ಹಾಗೂ ಯುವಜನರಲ್ಲೂ ಯೋಗದ ಬಗ್ಗೆ ಜಾಗೃತಿ ಮೂಡತೊಡಗಿದೆ. ನಮ್ಮ ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಅವರಿಗಾಗಿಯೇ ಯೋಗ ತರಬೇತಿಗಳನ್ನು ಏರ್ಪಡಿಸುವ ಸಂಸ್ಥೆಗಳೂ ಹುಟ್ಟಿಕೊಂಡಿವೆ. ಈ ಸಲದ ಅಂತಾರಾಷ್ಟ್ರೀಯ ಯೋಗ ದಿನ ನಿಮಿತ್ತ ಮಕ್ಕಳು, ಯುವಜನರು ಹಾಗೂ ಯೋಗ ಕುರಿತ ಒಂದಿಷ್ಟು ವಿಶೇಷ ಮಾಹಿತಿ ಇಲ್ಲಿವೆ.

| ಯುಕೆಎಸ್

‘ಶಾರೀರಿಕ, ಮಾನಸಿಕ, ಸಾಮಾಜಿಕ, ಅಧ್ಯಾತ್ಮ ಸ್ತರಗಳಲ್ಲಿ ವ್ಯಕ್ತಿಯು ಸಂಪೂರ್ಣವಾಗಿ ವಿಕಸನಗೊಳ್ಳುವ ಪ್ರಕ್ರಿಯೆಯೇ ಯೋಗ. ಇದು ಮಾನವನಲ್ಲಿ ಸುಪ್ತವಾಗಿರುವ ದಿವ್ಯಶಕ್ತಿಯನ್ನು ಅಭಿವ್ಯಕ್ತಗೊಳಿಸಿ ಆತ್ಮಸಾಕ್ಷಾತ್ಕಾರದೆಡೆಗೆ ಮುನ್ನಡೆಸಲು ಇರುವ ಮಾರ್ಗವೂ ಹೌದು. ಪರಮದೇವನೊಂದಿಗೆ ಏಕತ್ವ ಪ್ರಾಪ್ತಿಗಾಗಿ ಪ್ರಯತ್ನಿಸುವುದು ಹಾಗೂ ಅದನ್ನು ಹೊಂದುವುದು ಯೋಗದ ಸ್ವರೂಪವಾಗಿದೆ’

– ಹೀಗೆಂದು ಯೋಗಿ ಶ್ರೀ ಅರವಿಂದರು ಯೋಗದ ಬಗ್ಗೆ ವಿವರ ನೀಡುವ ವೇಳೆ ವ್ಯಾಖ್ಯಾನಿಸಿದ್ದರು. ಅರವಿಂದರ ಈ ವ್ಯಾಖ್ಯೆಯನ್ನು ಗಮನಿಸಿದರೆ ಸಾಕು, ಇದು ವಯೋವೃದ್ಧರಿಗಷ್ಟೇ ಸೀಮಿತವಲ್ಲ. ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಯೋಗ ಒಂದು ‘ಜೀವನ ಶೈಲಿ’ಯಾಗಿ ಅವಶ್ಯಕ ಎಂಬುದು ಮನವರಿಕೆಯಾದೀತು. ವಿಶೇಷ ಎಂದರೆ ‘ಆರೋಗ್ಯಪೂರ್ಣ ಜೀವನಶೈಲಿ ರೂಢಿಸುವಂತೆ ಯುವಜನರಲ್ಲಿ ಜಾಗೃತಿ ಮೂಡಿಸುವುದು’ ಎಂಬುದು ಈ ಸಲದ ಅಂತಾರಾಷ್ಟ್ರೀಯ ಯೋಗ ದಿನದ ಮುಖ್ಯ ಉದ್ದೇಶ. ನಗರಗಳಲ್ಲಿ ಜನರ ಜೀವನಶೈಲಿಯಂತೂ ಬಹಳ ಸ್ಪರ್ಧಾತ್ಮಕವಾದುದು ಹಾಗೂ ಒತ್ತಡದಿಂದಲೇ ಕೂಡಿರುವಂಥದ್ದು. ಹೀಗಾಗಿಯೇ ಎಲ್ಲರೂ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಯುವಜನರು ಹಾಗೂ ಮಕ್ಕಳನ್ನೂ ಬಿಟ್ಟಿಲ್ಲ ಈ ಸಮಸ್ಯೆಗಳು. ಬಹುತೇಕರಲ್ಲಿ ಹಿಂಸಾ ಮನೋಪ್ರವೃತ್ತಿ, ಶೋಷಿಸುವ ಭಾವನೆ, ಖಿನ್ನತೆ, ಶಿಕ್ಷಣದಲ್ಲಿ ನಿರಾಸಕ್ತಿ, ಸಾಮಾಜಿಕವಾಗಿ ಹೊಂದಿಕೊಳ್ಳಲಾಗದೆ ಇರುವಂಥದ್ದು ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.

ಯೋಗವೆಂದರೆ ವಿಜ್ಞಾನ

ಯೋಗವೆಂದರೆ ಅದು ಪವಿತ್ರ ಎಂಬ ಭಾವನೆ. ಜತೆಗೆ ಯೋಗವೆಂದರೆ ವಿಜ್ಞಾನ. ವಿದೇಶಿಯರಿಗೆ ವಿಜ್ಞಾನದಲ್ಲಿ ಅಪಾರ ಆಸಕ್ತಿ ಮತ್ತು ನಂಬಿಕೆ. ಯೋಗಕ್ಕೆ ವೈಜ್ಞಾನಿಕ ಹಿನ್ನೆಲೆ ಇದೆ, ಅದರಿಂದ ಮಹತ್ತರ ಪ್ರಯೋಜನವಿದೆ ಎಂದು ಅರಿತ ವಿದೇಶಿಯರು ಯೋಗಕ್ಕೆ ಆಸಕ್ತಿ ತೋರಿಸಿರುವುದು ಇಂದು ನಿನ್ನೆಯಲ್ಲ. ಯೋಗಕ್ಕೆ ಧರ್ಮವಿಲ್ಲ, ಜಾತಿ, ಮತ ಪಂಥದ ಕಟ್ಟುಪಾಡುಗಳಿಲ್ಲ, ಯಾರು ಬೇಕಾದರೂ ಯೋಗದಲ್ಲಿ ತೊಡಗಿಸಿಕೊಳ್ಳಬಹುದು, ಯೋಗದಿಂದ ಉಂಟಾದ ವೈಯಕ್ತಿಕ ಪ್ರಯೋಜನಗಳ ಬಗ್ಗೆ ಅರಿತ ಜನತೆ ಯೋಗಾಭ್ಯಾಸವನ್ನು ತಪ್ಪದೆ ಮಾಡುತ್ತಾರೆ.

ಮಕ್ಕಳಿಗೇಕೆ ಬೇಕು ಯೋಗ?

ಯೋಗ ಎಂದರೆ ಅದು ಹಿಂದುಗಳಿಗೆ ಸಂಬಂಧಿಸಿದ್ದೆಂಬ ತಪ್ಪು ಕಲ್ಪನೆಯಿಂದಾಗಿ ಶಾಲಾ ಹಂತದಲ್ಲಿ ಮಕ್ಕಳಿಗೆ ಯೋಗ ಕಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕೆಲವರ ವಿರೋಧವಿದೆ. ಆದಾಗ್ಯೂ, ಯೋಗಾಭ್ಯಾಸವು ಮಕ್ಕಳ ಬದುಕಿಗೆ ಹಲವು ರೀತಿಯ ಪ್ರಯೋಜನವನ್ನು ಒದಗಿಸುತ್ತದೆ. ಭಾವನಾತ್ಮಕ, ಸಾಮಾಜಿಕ, ದೈಹಿಕ ಸವಾಲುಗಳು ಅಥವಾ ಬಿಕ್ಕಟ್ಟು ಇವೇ ಮುಂತಾದವು ಮಕ್ಕಳು ಸರ್ವೆಸಾಮಾನ್ಯವಾಗಿ ಎದುರಿಸುವ ಸಮಸ್ಯೆಗಳು. ಉಸಿರಾಟದ ತಂತ್ರ, ನಡವಳಿಕೆ ತಿದ್ದಿಕೊಳ್ಳುವ ಮಾರ್ಗದರ್ಶನ, ಶರೀರ ಭಂಗಿಗಳು ಕೂಡ ಬಹಳ ಪ್ರಾಮುಖ್ಯ ವಹಿಸುತ್ತವೆ. ನಿತ್ಯ ಹಾಗೂ ನಿಯತವಾದ ಯೋಗಾಭ್ಯಾಸವನ್ನು ಮಕ್ಕಳು ಮಾಡುವುದರಿಂದ ಇಂತಹ ಹಲವು ಸಮಸ್ಯೆಗಳಿಂದ ಪಾರಾಗುವುದು ಸಾಧ್ಯವಿದೆ. ಮಕ್ಕಳಿಗೆ ಅದು ಆಟದ ಭಾಗವೇ ಆಗಿ ಹೋಗುವುದರಿಂದ ಅದುವೇ ಜೀವನಶೈಲಿಯಾಗಿ ರೂಪುಗೊಳ್ಳುತ್ತದೆ. ಇದು ಭವಿಷ್ಯದಲ್ಲೂ ಅವರ ಬದುಕಿಗೆ ಸಹಕಾರಿ ಎಂಬ ಈ ಅಂಶವನ್ನು ಅನೇಕರು ಹೇಳುತ್ತಾರೆ. ಭಾರತದಲ್ಲಿ ಮಕ್ಕಳ ಯೋಗ ಹೆಚ್ಚಾಗಿ ಪ್ರಚಲಿತದಲ್ಲಿ ಇಲ್ಲದೇ ಹೋದರೂ, ವಿದೇಶಗಳಲ್ಲಿ ಇದು ಗರಿಷ್ಠ ಪ್ರಮಾಣದಲ್ಲಿ ಪ್ರಚಲಿತದಲ್ಲಿದೆ. ಅಮೆರಿಕ ಮತ್ತು ಇತರೆ ಯುರೋಪ್ ರಾಷ್ಟ್ರಗಳಲ್ಲಿ ಕಿಡ್ಸ್ ಯೋಗ, ಮಿನಿಯೋಗೀಸ್ ಮುಂತಾದ ಸಂಸ್ಥೆಗಳು ಮಕ್ಕಳಿಗೆ ಯೋಗ ಹೇಳಿಕೊಡುವ ಕಾಯಕದಲ್ಲಿ ತೊಡಗಿಸಿಕೊಂಡಿವೆ.

ಪ್ರಯೋಜನಗಳೇನು: ಮಕ್ಕಳು ಶಾರೀರಿಕ ನಮ್ಯತೆಯನ್ನು ಸಾಧಿಸುವಲ್ಲಿ, ಶರೀರದ ಸಮತೋಲನ ಕಾಪಾಡುವಲ್ಲಿ, ನಿರ್ದಿಷ್ಟ ವಿಷಯದ ಬಗ್ಗೆ ನಿಖರತೆ ಹಾಗೂ ಏಕಾಗ್ರತೆ ಸಾಧಿಸುವಲ್ಲಿ, ಆತ್ಮಗೌರವ ಹಾಗೂ ವಿಶ್ವಾಸ ಹೆಚ್ಚಿಸುವಲ್ಲಿ, ಮನಸ್ಸು – ಶರೀರಗಳ ನಡುವಿನ ಸಮನ್ವಯ ಸಾಧಿಸುವಲ್ಲಿ ಯೋಗ ಸಹಕಾರಿ.

ಯುವಜನರಿಗೆ ಯೋಗ ಯಶಸ್ಸಿನ ಸೂತ್ರ

ಸಾಮಾನ್ಯವಾಗಿ ನಾವು ಹದಿನೈದು ವರ್ಷ ಮೇಲ್ಪಟ್ಟು 35 ವರ್ಷದೊಳಗಿನವರನ್ನು ಒಟ್ಟಾಗಿ ಯುವ ಸಮುದಾಯ ಎನ್ನುತ್ತೇವೆ. ಈ ಹಂತದಲ್ಲಿರುವವರು ಬಹುತೇಕರು ಪ್ರೌಢ ಶಿಕ್ಷಣ ಮುಗಿಸಿ, ಪದವಿಪೂರ್ವ ಶಿಕ್ಷಣದಿಂದ ಹಿಡಿದು ಸ್ನಾತಕೋತ್ತರ ಶಿಕ್ಷಣ ಪಡೆದು ಕೆಲಸಕ್ಕೆ ಸೇರಿ ಆರಂಭಿಕ, ಮಧ್ಯಮ ಹಂತದಲ್ಲಿ ಕೆಲಸ ಮಾಡುತ್ತಿರುವವರು. ಈ ಅವಧಿಯಲ್ಲಿ ನಾನಾ ಕಾರಣಗಳಿಗಾಗಿ ಸ್ಟ್ರೆಸ್ ಅರ್ಥಾತ್ ಮಾನಸಿಕ ಒತ್ತಡ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ನಡವಳಿಕೆಯಲ್ಲಿ ಲೋಪದೋಷಗಳು, ಹಿಂಸಾ ಪ್ರವೃತ್ತಿ ಮುಂತಾದವು ಕಾಣಿಸಿಕೊಳ್ಳುವುದು ಸಹಜ. ಇಂತಹ ನಡವಳಿಕೆಗಳನ್ನು ನಿಯಂತ್ರಿಸುವುದಕ್ಕೆ ಯೋಗ ಸಹಕಾರಿ. ಯುವಜನರು ನಿಯತವಾಗಿ ಯೋಗಾಭ್ಯಾಸ ಮಾಡುವುದರಿಂದ ಹಲವು ಪ್ರಯೋಜನಗಳಾಗುತ್ತವೆ. ಅವುಗಳನ್ನು ಪಟ್ಟಿಮಾಡುವುದಾದರೆ,

ನಡವಳಿಕೆಯಲ್ಲಿ ಸ್ಥಿರತೆ: ಶಿಸ್ತು ಮತ್ತು ಗೌರವ, ಆಸಕ್ತಿ ಮತ್ತು ಪ್ರೇರಣೆ, ಮನಸ್ಸಿನಲ್ಲಾಗುವ ಪ್ರಕ್ಷುಬ್ಧತೆಯ ನಿರ್ವಹಣೆ, ತಾಳ್ಮೆ, ಧನಾತ್ಮಕ ಚಿಂತನೆ ಹಾಗೂ ಸಾಮಾಜಿಕ ಸಂವಹನದಲ್ಲಿ ಔನ್ನತ್ಯಗಳನ್ನು ಕಾಣಬಹುದು.

ಶಾರೀರಿಕ ಆರೋಗ್ಯ: ತೂಕ ಹಾಗೂ ವ್ಯಾಯಾಮ, ಸಂಕಷ್ಟದ ಸನ್ನಿವೇಶಗಳ ನಿರ್ವಹಣೆ, ಪೌಷ್ಠಿಕ ಹಾಗೂ ಧನಾತ್ಮಕ ಆಹಾರ ಸೇವನಾ ಕ್ರಮಗಳು, ವಾಸ್ತವದ ಅರಿವು, ಶರೀರದ ಆರೋಗ್ಯಕ್ಕೆ ಸಂಬಂಧಿಸಿದ ತಿಳಿವಳಿಕೆಗಳನ್ನೂ ಪಡೆಯಬಹುದು.

ಆತ್ಮಗೌರವ: ಸ್ಟ್ರೆಸ್ ಹಾಗೂ ಕಳವಳಗಳ ನಿರ್ವಹಣೆ, ಶಾಂತತೆ ಹಾಗೂ ಆತ್ಮವಿಶ್ವಾಸ, ಸಮಚಿತ್ತ, ಸ್ವಗೌರವ ಮತ್ತು
ನೈಪುಣ್ಯತೆ ಸಾಧಿಸುವ ಮೂಲಕ ಶರೀರ ವಿನ್ಯಾಸ ಹಾಗೂ ಆವಿರ್ಭಾವಗಳಲ್ಲೂ ಬಹಳಷ್ಟು ಬದಲಾವಣೆಗಳನ್ನು ಕಂಡುಕೊಳ್ಳಲು ಸಾಧ್ಯವಿದೆ.

ಶೈಕ್ಷಣಿಕ ಬುದ್ಧಿಮತ್ತೆ: ಶಿಕ್ಷಣದಲ್ಲೂ ವಿಷಯ ನಿಖರತೆ ಮತ್ತು ದೃಢತೆ ಕಂಡುಕೊಳ್ಳುವುದು, ಅಧ್ಯಯನದ ಹವ್ಯಾಸ ಉನ್ನತೀಕರಿಸುವುದು, ತರಗತಿಯಲ್ಲಿ ಭಾಗಿಯಾಗುವ ಪ್ರಮಾಣ, ಸೃಜನಶೀಲತೆ, ಗ್ರಹಿಸುವ ಶಕ್ತಿ ಮತ್ತಿತರೆ ಅಂಶಗಳು ಹೆಚ್ಚಾಗುವುದು.

ಈ ಸಲದ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶೇಷವಾಗಿ ಯುವಜನರನ್ನು ಗಮನದಲ್ಲಿರಿಸಿಕೊಂಡೇ ಆಚರಿಸಲಾಗುತ್ತಿದೆ. ಆರೋಗ್ಯಪೂರ್ಣ ಜೀವನ ಶೈಲಿ ಅಳವಡಿಸಬೇಕು ಎಂಬ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಇದರ ಉದ್ದೇಶ.

| ಶ್ರೀಪಾದ ನಾಯ್್ಕ, ಕೇಂದ್ರದ ಆಯುಷ್ ಇಲಾಖೆ ರಾಜ್ಯ ಸಚಿವ

ಅಂತಾರಾಷ್ಟ್ರೀಯ ಯೋಗ ದಿನದಂದು ವಿಶ್ವಸಂಸ್ಥೆಯ 193 ಸದಸ್ಯರಾಷ್ಟ್ರಗಳು ಕಳೆದ ವರ್ಷ ಅಂಗೀಕರಿಸಿರುವ ‘ಆರೋಗ್ಯ ಪೂರ್ಣ ಜೀವನ ಶೈಲಿಗೆ ಯೋಗ ಹಾಗೂ ಅದರ ಮೂಲಕ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಕಾರಗೊಳಿಸುವುದು’ ಆಚರಣೆಯ ಉದ್ದೇಶ.

| ಬಾನ್ ಕಿ-ಮೂನ್ ವಿಶ್ವಸಂಸ್ಥೆಯ ಸೆಕ್ರಟರಿ ಜನರಲ್

ಆಧುನಿಕ ಬದುಕಿಗೆ ಯೋಗ ಅತ್ಯಗತ್ಯ

ವಿಕಾಸವೇ ಬದುಕು, ಸಂಕೋಚವೇ ಮರಣ ಎಂಬುದು ನನ್ನ ನಂಬಿಕೆ. ಯೋಗದ ಅಭ್ಯಾಸದಿಂದ ಜೀವನದಲ್ಲಿ ವಿಚಾರ, ದೃಷ್ಟಿಯಲ್ಲಿ ವಿಶಾಲತೆ ಬರುತ್ತದೆ. ಯೋಗ ಕಲಿಯಲು ಬರುವವರು ಜನಸಂಪರ್ಕ ಹೊಂದುವುದರಿಂದ ಖಿನ್ನತೆ ಕಮ್ಮಿಯಾಗುತ್ತದೆ. ದೈಹಿಕ ಬಿಗಿ ಹೋಗಿ ದೇಹ ಸಡಿಲವಾಗುತ್ತದೆ, ಶಕ್ತಿಯ ಸಂಚಾರವಾಗುತ್ತದೆ. ಯೋಗ ಮಾಡುವಾಗ ರಾಸಾಯನಿಕ ಬದಲಾವಣೆಯಾಗುವುದರಿಂದ ಉತ್ಸಾಹ ಉಂಟಾಗುತ್ತದೆ. ಅತಿವೇಗ, ಆತಂಕ, ಯಾರೂ ಬೇಡ ಎಂಬ ಮನೋಭಾವ ಮತ್ತು ತೀವ್ರ ಸ್ಪರ್ಧೆ ಇರುವ ಈ ಯುಗದಲ್ಲಿ ಈ ಕಾರಣಕ್ಕೆ ಯೋಗ ಮುಖ್ಯವೆನಿಸುತ್ತದೆ. ಮೋರ್ ಅಂಡ್ ಮೋರ್ ಸೊಫೆಸ್ಟಿಕೇಶನ್ ಔಟ್​ಸೈಡ್, ಮೋರ್ ಅಂಡ್ ಮೋರ್ ಸಫೊಕೇಶನ್ ಇನಸೈಡ್ ಎಂಬಂತೆ ಈಗ ಆಗಿಬಿಟ್ಟಿದೆ. ಯೋಗಮಾಡುವುದೆಂದರೆ ವಿದೇಶಕ್ಕೆ ಹೋಗಿದ್ದ ವ್ಯಕ್ತಿ ಮತ್ತೆ ತನ್ನ ಬಡಾವಣೆ, ತನ್ನ ರಸ್ತೆ ಕಡೆಗೆ ತನ್ನದೇ ಮನೆಗೆ ಮರಳಿದಂತೆ. ಈಗ ವಿದೇಶದಲ್ಲೂ ಸ್ವಾಗತ ಪಡೆದಿರುವ ಯೋಗ ಮರಳಿ ಮನೆಗೆ ಬಂದಿದೆ.

| ರಾಘವೇಂದ್ರ ಶೆಣೈ ಪ್ರಸಿದ್ಧ ಯೋಗ ತಜ್ಞರು

ಯೋಗ ದಿನಾಚರಣೆ ತಂತು ಬದಲಾವಣೆ

| ಎ.ನಾಗೇಂದ್ರಕಾಮತ್ ನಿರ್ದೇಶಕ, ರಾಷ್ಟ್ರೋತ್ಥಾನ ಯೋಗ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರ.

ಅಂತಾರಾಷ್ಟ್ರೀಯ ಯೋಗ ದಿನ ಎಂದು ಘೊಷಣೆಯಾದ ಒಂದು ವರ್ಷದಲ್ಲಿ ಆದ ಬದಲಾವಣೆಗಳೇನು? ಯೋಗದ ಬಗ್ಗೆ ಒಲವು ಸೃಷ್ಟಿಯಾಗಿದೆಯೇ ಎಂಬ ಪ್ರಶ್ನೆ ಹುಡುಕಿಕೊಂಡು ಹೊರಟರೆ ಸಮಾಜದಲ್ಲಿ ಹಲವು ಆಶಾದಾಯಕ ಬೆಳವಣಿಗೆಗಳು ಗೋಚರಿಸುತ್ತವೆ. ನಿಧಾನವಾಗಿ ಯೋಗ ಜನಮಾನಸವನ್ನು ವ್ಯಾಪಿಸತೊಡಗಿದೆ.

ಯೋಗದ ಕುರಿತಂತೆ ಕಳೆದೊಂದು ವರ್ಷದಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಕಂಡುಬರುತ್ತಿದೆ.ಯೋಗವನ್ನು ಕಲಿಯುವ ಆಸಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹಿರಿಯರು, ವೃದ್ಧರಾದ ಮೇಲೆ ಯೋಗ – ವ್ಯಾಯಾಮ ಮಾಡಿದರೆ ಸಾಕು ಎಂಬ ಭಾವನೆಯಿಂದ ಜನರು ಹೊರಬಂದಿದ್ದಾರೆ. ಯೋಗ ಮಾಡುವುದರಿಂದ ವ್ಯಕ್ತಿಯ ನೈತಿಕ, ಶಾರೀರಿಕ, ಮಾನಸಿಕ ಬದಲಾವಣೆಯೂ ಸಾಧ್ಯ ಎಂಬ ಅರಿವು ಮೂಡಿದೆ. ಶಾಲಾ ಮಕ್ಕಳು, ಕಾಲೇಜು ಯುವಕ, ಯುವತಿಯರು ಯೋಗ ಕಲಿಯಲು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಈಗಂತೂ ಸರ್ಕಾರಿ ಶಾಲೆಗಳಲ್ಲಿ ಮಾತ್ರವಲ್ಲ, ಅನೇಕ ಖಾಸಗಿ ಶಾಲೆಗಳಲ್ಲಿ ಮಕ್ಕಳಲ್ಲಿ ಲವಲವಿಕೆ, ನೆನಪಿನ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ತರಗತಿಗಳಲ್ಲೇ ಯೋಗ ಹೇಳಿಕೊಡಲಾಗುತ್ತಿದೆ. ಕೆಲವು ಅಂತಾರಾಷ್ಟ್ರೀಯ ಶಾಲೆಗಳಲ್ಲಿ ಇದನ್ನು ಮಾಮೂಲಿ ಸಿಲೆಬಸ್​ನಂತೆ ಬೋಧಿಸಲಾಗುತ್ತಿದೆ. ಇದು ಯೋಗದಿನದ ಹೆಚ್ಚುಗಾರಿಕೆ.

ಯೋಗದ ವಾಸ್ತವಾಂಶಗಳನ್ನು ತಿಳಿದುಕೊಳ್ಳಲು ಹೆಚ್ಚು ಹೆಚ್ಚು ಜನರು ಆಸಕ್ತರಾಗುತ್ತಿದ್ದಾರೆ. ‘ಓಂಕಾರ’ ಉಚ್ಛರಿಸುವ ಕುರಿತಂತೆ ವಿವಾದ ಸೃಷ್ಟಿಯಾಗಿತ್ತು. ಆದರೆ ‘ಓಂಕಾರ’ ಉಚ್ಛರಣೆಯಿಂದ ಮಿದುಳಿನ ನರಗಳ ಮೇಲಾಗುವ ಬದಲಾವಣೆ, ಮಕ್ಕಳಲ್ಲಿ ನೆನಪಿನ ಶಕ್ತಿ ವೃದ್ಧಿಯಾಗುತ್ತಿರುವುದು ಮನವರಿಕೆಯಾಗುತ್ತಿದ್ದಂತೆ ಎಲ್ಲರೂ ಅದನ್ನು ಒಪ್ಪಿದ್ದಾರೆ. ಎಲ್ಲ ಧರ್ಮೀಯರು ಇದನ್ನು ಉಚ್ಛರಿಸುತ್ತಿರುವುದನ್ನು ಈಗ ಕಾಣಬಹುದು. ಇದುವೇ ಬದಲಾವಣೆಯ ಪರ್ವ. ಇಷ್ಟಲ್ಲದೇ ಯೋಗದ ಆಸನಗಳ ಕುರಿತಂತೆ ಜನಸಾಮಾನ್ಯರಲ್ಲಿ ಅರಿವಿನ ವೃದ್ಧಿಯಾಗಿದೆ. ಈ ಹಿಂದೆ ಸಾಮಾನ್ಯರಂತೆ ಯೋಗದ ಆಸನಗಳನ್ನು ಮಾಡುತ್ತಿದ್ದವರು ಈಗ ಅದರಿಂದ ಆಗುವ ಲಾಭಗಳ ಬಗ್ಗೆಯೂ ತಿಳಿದುಕೊಂಡು ಅನುಭವವನ್ನು ಕಂಡುಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಇಂಟರ್​ನೆಟ್, ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಪ್ರತಿಯೊಂದು ಆಸನಗಳನ್ನು ಮಾಡುವ ವಿಧಾನ, ಅದರ ಲಾಭಗಳ ಕುರಿತಾದ ಸಮಗ್ರ ಮಾಹಿತಿ ಲಭ್ಯವಾಗುತ್ತಿದೆ. ಈ ಹಿಂದೆಯೂ ಈ ವಿಚಾರ ಚರ್ಚೆಯಾದರೂ, ಯೋಗದಿನದ ಬಳಿಕ ಸಾರ್ವಜನಿಕವಾಗಿ ಹೆಚ್ಚೆಚ್ಚು ಚರ್ಚೆಯಾಗುತ್ತಿದೆ.

ಇದು ಸಾಧ್ಯ.

ಇದು ಸಾಧ್ಯ!
ಸಿವಿಲ್ ಸರ್ವೀಸಸ್ ಪರೀಕ್ಷೆಗೆ ನಿಮಗೆ ನಿಜಕ್ಕೂ ಆಸಕ್ತಿ ಇದ್ದರೆ, ಕೂಡಲೇ upsc.gov.in ಜಾಲತಾಣದಲ್ಲಿ ತಡಕಾಡಿ. ಇಲ್ಲಿ ನಾಗರಿಕ ಸೇವಾ ಪರೀಕ್ಷೆಗಳು ಸೇರಿದಂತೆ ಇತರೆ ಬಹಳಷ್ಟು ಪರೀಕ್ಷೆಗಳ ಸಂಪೂರ್ಣ ವಿವರ ಲಭ್ಯವಿದೆ. ಈ ಮೂಲಕ ಇಂಥ ಪರೀಕ್ಷೆಗಳಿಗೆ ಅಗತ್ಯವಿರುವ ತಿಳಿವಳಿಕೆಯ ಕುರಿತು ಪ್ರಸ್ತಾಪಿಸಿದ್ದಾರೆ ಡಾ.ಆಕಾಶ್ ಎಸ್. ಎಂಬಿಬಿಎಸ್ ಓದುವಾಗಲೇ ಯುಪಿಎಸ್​ಸಿಯಲ್ಲಿ ಯಶಸ್ವಿಯಾಗಿದ್ದ ಸಹಪಾಠಿಗಳಿಂದ ಪ್ರೇರಿತರಾಗಿ ಎರಡನೇ ಪ್ರಯತ್ನದಲ್ಲಿ 959ನೇ ರ್ಯಾಂಕ್ ಮೂಲಕ ಗುರಿ ಮುಟ್ಟಿದ್ದಾರೆ.

| ಡಾ. ಆಕಾಶ್ ಎಸ್. 959ನೇ ರ್ಯಾಂಕ್

ಮೂ ಲತಃ ಮೈಸೂರಿನವರಾದ ಆಕಾಶ್, ಸಿಇಟಿಯಲ್ಲಿ ಉತ್ತಮ ರ್ಯಾಂಕ್ ಪಡೆದ ಕಾರಣ, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲೇ ಅಧ್ಯಯನ ಮಾಡುವ ಅವಕಾಶ ದೊರೆಯಿತು. ವೈದ್ಯಕೀಯ ಶಿಕ್ಷಣದ ಕಡೇ ವರ್ಷ ಇಂಟರ್ನ್​ಷಿಪ್ ಮಾಡುವಾಗ ಯುಪಿಎಸ್​ಸಿ ಕುರಿತು ಆಸಕ್ತಿ ಮೂಡಿತು ಎಂದು ವಿವರಿಸುತ್ತಾರೆ.

ಎಂಬಿಬಿಎಸ್ ಬಳಿಕ ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಟ್ರೖೆನಿ ಮೆಡಿಕಲ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತ ತಯಾರಿ ನಡೆಸಿದೆ. ಭೂಗೋಳ ಐಚ್ಛಿಕ ವಿಷಯದೊಂದಿಗೆ 2014ರಲ್ಲಿ ನಡೆಸಿದ ಪ್ರಯತ್ನದಲ್ಲಿ ಯಶಸ್ಸು ಕಾಣಲಿಲ್ಲ. ಆದರೆ, ಸ್ನೇಹಿತ ಡಾ. ವಿನೋದ್ ಕುಮಾರ್ ಅವರಿಂದ ಪ್ರೇರಿತಗೊಂಡೆ. ನಂತರ ದೆಹಲಿಯಲ್ಲಿ ತರಬೇತಿ ಪಡೆದು, ಸ್ನೇಹಿತರೊಂದಿಗೆ ಗುಂಪು ಅಧ್ಯಯನದಲ್ಲಿ ತೊಡಗಿದೆ. ಡಾ.ವಿನೋದ್ ನಮ್ಮ ಮಾರ್ಗ ದರ್ಶನಕ್ಕೆ ಇದ್ದರು. 2014ರ ಕೆಪಿಎಸ್​ಸಿ ಪರೀಕ್ಷೆಯನ್ನೂ ಬರೆದಿದ್ದೆ. ಅದರಲ್ಲೂ ಸಂದರ್ಶನಕ್ಕೆ ಆಯ್ಕೆಯಾಗಿ ದ್ದೇನೆ. ಯೋಜಿತ ಓದು ಬಹಳ ಮುಖ್ಯ. ದೀರ್ಘಾವಧಿ ಗುರಿ ಮತ್ತು ಅಲ್ಪಾವಧಿ ಗುರಿಗಳನ್ನು ನಿರ್ಧರಿಸಿ ಕೊಳ್ಳಬೇಕು. ಇಚ್ಛಾಶಕ್ತಿ ಮತ್ತು ಶಿಸ್ತು ಓದಿನಲ್ಲಿ ಮುಖ್ಯ, ಯಾವ ಕಾರಣಕ್ಕೂ ದಿನದ ಓದನ್ನು ಮುಂದೂಡಲೇಬಾರದು. ಯುಪಿಎಸ್​ಸಿ ಪಾಸ್ ಮಾಡಲು ಕೋಚಿಂಗ್ ಕ್ಲಾಸ್​ಗೆ ಹೋಗಲೇಬೇಕೆಂದೇನಿಲ್ಲ.

ಕಡಿಮೆ ಸಂಗ್ರಹ, ಹೆಚ್ಚು ಓದು

ಹತ್ತಾರು, ನೂರಾರು ಪುಸ್ತಕಗಳನ್ನು ಕೊಳ್ಳುವುದು, ನೋಟ್ಸ್​ಗಳಿಗಾಗಿ ಓಡಾಡಿ ಒಂದರ ಮೇಲೊಂದು ಜೋಡಿಸಿಡುವುದರಿಂದ ಪ್ರಯೋಜನವಿಲ್ಲ. ಆದಷ್ಟು ಕಡಿಮೆ ಓದುವ ಸಾಮಗ್ರಿ ಇರಲಿ. ನಿತ್ಯ ಒಂದು ಪತ್ರಿಕೆ, ‘ಯೋಜನಾ’ದಂತಹ ತಿಂಗಳಿಗೆ ಒಂದು ಮ್ಯಾಗಜಿನ್, ಜತೆಗೆ ಕೆಲವು ವೆಬ್​ಸೈಟ್ ಸಾಕು. ಗಮನಿಸಬಹುದಾದ ವೆಬ್​ಸೈಟ್​ಗಳು; insightsonindia.com, mrunal.org, iasbaba.com, prsindia.org.

(ಸಂಪೂರ್ಣ ಮಾಹಿತಿಗೆ ವಿದ್ಯಾರ್ಥಿ ಮಿತ್ರ ಓದಿ)

ಬಡ್ಡಿಗಿಂತಲೂ ಹೆಚ್ಚು ಬೆದರಿಸುವ ದರ ಸಾಲದಲ್ಲಿದೆ!

ಸಾಮಾನ್ಯವಾಗಿ ಈಗಿನ ದೀರ್ಘಾವಧಿ ಸಾಲಗಳಿಗೆ ಬಡ್ಡಿ ದರ ಬದಲಾಗುತ್ತಿರುತ್ತದೆ. ಎಂಸಿಎಲ್​ಆರ್ ಎಂಬ ಸೂತ್ರವನ್ನು ಅಳವಡಿಸಲಾಗಿದ್ದು, ಪ್ರತಿ ವರ್ಷವೂ ಬಡ್ಡಿ ದರವನ್ನು ಬದಲಿಸಲಾಗುತ್ತದೆ. ಹೀಗಾಗಿ ಗೃಹ ಸಾಲ ಪಡೆದವರು ಪ್ರತಿ ವರ್ಷವೂ ಬಡ್ಡಿ ದರವನ್ನು ಪರಿಶೀಲಿಸುತ್ತಿರಬೇಕು. ಬಡ್ಡಿ ದರದ ಹೊರತಾಗಿ ಕಾಣದಿರುವ ಹಲವು ಶುಲ್ಕಗಳ ಅರಿವಿಲ್ಲದೇ ಹೋದರೆ, ‘ಸಾಲ’ ಶೂಲವಾದೀತು.

|ಕೃಷ್ಣ ಭಟ್

ಸಾಲ ಎಂದ ತಕ್ಷಣ ನಾವು ‘ಬಡ್ಡಿ ಎಷ್ಟು?’ ಎಂದು ಕೇಳುತ್ತೇವೆ. ಇದು ಹಿಂದಿನ ಕಾಲದಿಂದಲೂ ರೂಢಿಯಲ್ಲಿರುವ ಸಂಪ್ರದಾಯ. ಹಿಂದೆ ಊರಿನ ಅಥವಾ ಪರವೂರಿನ ದಲ್ಲಾಳಿ ಹಣ ಕೊಡುವಾಗ ಬಡ್ಡಿ ದರವನ್ನು ಮಾತ್ರ ಹೇಳುತ್ತಿದ್ದ. ಇತರ ಶುಲ್ಕಗಳ ಬಗ್ಗೆ ಸಾಲ ಕೊಟ್ಟಮೇಲೇ ತಿಳಿಯುತ್ತಿತ್ತು. ಆದರೆ ಈಗ ಸಾಲ ಕೊಡಲು ಬ್ಯಾಂಕ್​ಗಳಿವೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿವೆ, ಸಹಕಾರಿ ಸಂಸ್ಥೆಗಳಿವೆ… ಎಲ್ಲದರಲ್ಲೂ ಬಡ್ಡಿ ದರವಿದೆ. ಇದರ ಜತೆಗೇ ಇತರ ಶುಲ್ಕಗಳೂ ಇರುತ್ತವೆ. ಸಾಮಾನ್ಯವಾಗಿ ಒಂದು ಸಾಲದಲ್ಲಿ ಬಡ್ಡಿಯ ಹೊರತಾಗಿ ಕನಿಷ್ಠ ನಾಲ್ಕರಿಂದ ಐದು ರೀತಿಯ ಶುಲ್ಕಗಳಿರುತ್ತವೆ. ಸಾಲ ಪಡೆಯುವ ಹೊತ್ತಲ್ಲಿ ಕೆಲವು ಶುಲ್ಕಗಳು ಕಡ್ಡಾಯವಾದರೆ, ಇನ್ನು ಕೆಲವು ಕಾಲಕಾಲಕ್ಕೆ ಜಾರಿಗೆ ಬರುತ್ತವೆ. ಉದಾಹರಣೆಗೆ ಪ್ರೊಸೆಸಿಂಗ್ ಫೀ ಕಡ್ಡಾಯ. ಆದರೆ ನೀವು ಸಮಯಕ್ಕೆ ಸರಿಯಾಗಿ ಪಾವತಿ ಮಾಡಲು ವಿಫಲವಾದರೆ ಮಾತ್ರ ದಂಡ ವಿಧಿಸಲ್ಪಡುತ್ತದೆ. ಅದೇ ರೀತಿ ಪ್ರೀ ಕ್ಲೋಶರ್ ಶುಲ್ಕ ಕೂಡ. ಅವಧಿಗೂ ಮುನ್ನವೇ ಸಾಲವನ್ನು ಚುಕ್ತಾ ಮಾಡುತ್ತೀರಿ ಎಂದಾದರೆ ನೀವು ಈ ಶುಲ್ಕ ತೆರಬೇಕಾಗುತ್ತದೆ.

ಕೆಲವು ವರ್ಷಗಳ ಹಿಂದೆ ಸಾಲ ಮಾರುಕಟ್ಟೆ ಬೆಳೆಯುತ್ತಿದ್ದಂತೆ ಬಡ್ಡಿಯ ಜತೆಗೇ ಬ್ಯಾಂಕ್​ಗಳು ಪ್ರೊಸೆಸಿಂಗ್ ಫೀಯನ್ನೂ ಸೇರಿಸಿಬಿಡುತ್ತಿದ್ದವು. ಗ್ರಾಹಕರು ಈ ಬಗ್ಗೆ ಸ್ಪಷ್ಟ ಅರಿವು ಪಡೆದುಕೊಳ್ಳುವುದು ಸಾಧ್ಯವೇ ಆಗುತ್ತಿರಲಿಲ್ಲ. ಆದರೆ ನಂತರದಲ್ಲಿ ಆರ್​ಬಿಐ ನಿಯಮ ಬಿಗಿಗೊಳಿಸಿದೆ. ಪ್ರೊಸೆಸಿಂಗ್ ಫೀ ಸೇರಿದಂತೆ ಗ್ರಾಹಕನಿಗೆ ವಿಧಿಸುವ ಎಲ್ಲ ಶುಲ್ಕ ಹಾಗೂ ದರಗಳ ವಿವರಗಳನ್ನು ಮೊದಲೇ ವಿಸõತವಾಗಿ ಒದಗಿಸುವುದು ಈಗ ಕಡ್ಡಾಯವಾಗಿದೆ.

ಸಾಲ ಪಡೆಯುವ ಪ್ರಕ್ರಿಯೆಯಲ್ಲಿ ಪ್ರಮುಖವಾಗಿ ಬಡ್ಡಿ ದರವಿದ್ದರೆ, ಪ್ರೊಸೆಸಿಂಗ್ ಫೀ, ಅಪ್​ಫ್ರಂಟ್ ಫೀ ಕೂಡ ಪ್ರಮುಖವಾದವು. ಈ ಪೈಕಿ ಕೆಲವು ಬ್ಯಾಂಕ್​ಗಳು ಹಾಗೂ ಹಣಕಾಸು ಸಂಸ್ಥೆಗಳು ಮಾತ್ರ ಅಪ್​ಫ್ರಂಟ್ ಶುಲ್ಕ ವಿಧಿಸುತ್ತವೆ. ಸಾಲದ ಅರ್ಜಿ ಸಲ್ಲಿಸುವಾಗಲೇ ಈ ಶುಲ್ಕವನ್ನು ಭರಿಸಬೇಕಿರುತ್ತದೆ. ಅರ್ಜಿ ತಿರಸ್ಕೃತವಾಗಲೀ ಅಥವಾ ಅನುಮೋದಿಸಲ್ಪಡಲಿ ಈ ಶುಲ್ಕ ವಾಪಸ್ ಬರುವುದಿಲ್ಲ. ನಿಮ್ಮ ಅರ್ಜಿಯನ್ನು ಪ್ರೋಸೆಸ್ ಮಾಡಲು ಈ ಶುಲ್ಕವನ್ನು ಹಣಕಾಸು ಸಂಸ್ಥೆಗಳು ವಿಧಿಸುತ್ತವೆ. ಇದರ ನಂತರ ಸಾಲ ಮಂಜೂರಾದರೆ ಅಡ್ಮಿನ್ ಫೀ, ಕಾನೂನು ಶುಲ್ಕ, ತೆರಿಗೆಗಳು ಮತ್ತು ಸೆಸ್​ಗಳನ್ನು ವಿಧಿಸಲಾಗುತ್ತದೆ. ಈ ಪೈಕಿ ಯಾವುದು ಎಷ್ಟು ಮೊತ್ತದಲ್ಲಿರುತ್ತವೆ ಎಂಬುದನ್ನು ಬ್ಯಾಂಕ್​ನಿಂದ ವಿವರವಾಗಿ ಮೊದಲೇ ಪಡೆಯುವುದು ಒಳಿತು. ಇಲ್ಲವಾದರೆ ಮರುಪಾವತಿ ಮೊತ್ತ ಹೆಚ್ಚಾದೀತು. ಗೃಹ ಸಾಲವಾದರೆ ನಿಮ್ಮ ಕೈಗೆ ಬರುವ ಮೊತ್ತ ಕಡಿಮೆಯಾದೀತು.

ಸಾಮಾನ್ಯವಾಗಿ ಎಲ್ಲ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳು ವಿಮೆ ಕಂಪನಿಯ ಜತೆ ಒಪ್ಪಂದ ಮಾಡಿಕೊಂಡಿರುತ್ತವೆ. ಸಾಲಗಾರರಿಗೆ ವಿಮೆಯನ್ನೂ ಮಾರಲಾಗುತ್ತದೆ. ಆದರೆ ಸಾಲದ ಜತೆಗೆ ವಿಮೆ ಪಡೆಯುವುದು ಕಡ್ಡಾಯವಲ್ಲ. ಬ್ಯಾಂಕ್​ಗಳು ಸಾಲ ಪಡೆಯುವವರಿಗೆ ಈ ಬಗ್ಗೆ ವಿವರಿಸುತ್ತವೆಯಾದರೂ, ಗ್ರಾಹಕರು ಯಾವುದೋ ಮುಜುಗರಕ್ಕೆ ಕಟ್ಟುಬಿದ್ದು ತೆಗೆದುಕೊಳ್ಳುವ ಅಗತ್ಯವಿಲ್ಲ. ಒಂದು ವೇಳೆ ಬ್ಯಾಂಕ್​ನ ಎಕ್ಸಿಕ್ಯೂಟಿವ್, ಈ ವಿಮೆ ಕಡ್ಡಾಯ ಎಂದರೆ ನಂಬಬೇಡಿ. ಸಾಮಾನ್ಯವಾಗಿ ಉತ್ಪನ್ನ ವಿಮೆ ಮತ್ತು ಜೀವ ವಿಮೆ ಪಾಲಿಸಿಗಳನ್ನು ಸಾಲದ ಜತೆಗೆ ಮಾರಲಾಗುತ್ತದೆ. ಗೃಹ ಸಾಲವಾದರೆ ಜೀವ ವಿಮೆ ಹಾಗೂ ಉತ್ಪನ್ನಗಳ ಮೇಲೆ ನೀಡಲಾಗುವ ಸಾಲವಾದರೆ ಉತ್ಪನ್ನಗಳಿಗೆ ವಿಮೆಯ ಆಫರ್ ಮಾಡಲಾಗುತ್ತದೆ. ಈ ವಿಮೆ ಕಂತಿನಿಂದ ನಿಮ್ಮ ಸಾಲದ ಕಂತಿನ ಮೊತ್ತ ಹೆಚ್ಚುತ್ತದೆ. ಬ್ಯಾಂಕ್​ನ ಎಕ್ಸಿ್ಸ್ಯೂಟಿವ್​ಗಳಿಗೆ ಉತ್ತಮ ಕಮಿಷನ್ ಲಭ್ಯವಾಗುತ್ತದೆ ಎಂಬ ಕಾರಣಕ್ಕೆ ನಿಮ್ಮನ್ನು ಬಲವಂತ ಮಾಡಬಹುದು. ಆದರೆ ನೀವು ಈಗಾಗಲೇ ವಿಮೆ ಹೊಂದಿದ್ದರೆ ಮತ್ತೊಂದು ಇಂತಹ ವಿಮೆ ಪಾಲಿಸಿ ಖರೀದಿಸುವ ಅಗತ್ಯವಿರುವುದಿಲ್ಲ. ಉತ್ಪನ್ನ ವಿಮೆ ಐಚ್ಛಿಕ ಹಾಗೂ ಕೆಲವು ಸನ್ನಿವೇಶದಲ್ಲಿ ಅಗತ್ಯವೂ ಹೌದು. ಹೀಗಾಗಿ ವಿಮೆ ಪಾಲಿಸಿ ಖರೀದಿಸುವ ಮುನ್ನ ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಿಯೇ ಮುಂದುವರಿಯುವುದು ಒಳಿತು.

ಇದರ ಹೊರತಾಗಿ ಸರ್ಕಾರ ವಿಧಿಸಿದ ಕೆಲವು ಶುಲ್ಕಗಳನ್ನು ಸಾಲದ ಮೇಲೆ ವಿಧಿಸಲಾಗುತ್ತದೆ. ನಿಮ್ಮ ಪ್ರತಿಯೊಂದು ರೂಪಾಯಿಯೂ ಪ್ರಮುಖವೇ. ಹೀಗಾಗಿ ಇತರ ಬ್ಯಾಂಕ್​ಗಳೂ ಇದೇ ರೀತಿಯ ಶುಲ್ಕ ವಿಧಿಸುತ್ತಿವೆಯೇ ಎಂದು ಪರಿಶೀಲಿಸಿ. ಇವೆಲ್ಲವನ್ನೂ ಸಾಲ ಮಂಜೂರಾಗಿ ನಿಮ್ಮ ಖಾತೆಗೆ ಹಣ ಬರುವ ಮೊದಲೇ ವಿಚಾರಿಸಿದರೆ, ಸಾಲ ಬೇಕೋ ಬೇಡವೋ ಎಂಬ ನಿರ್ಧಾರ ಮಾಡುವ ಆಯ್ಕೆಗೆ ಅವಕಾಶವಿರುತ್ತದೆ. ಇವೆಲ್ಲದರ ಜತೆಗೆ ಇತರ ಶುಲ್ಕಗಳೂ ಇರುತ್ತವೆ. ಅವಧಿಗೂ ಮುನ್ನ ಸಾಲ ತೀರಿಸುತ್ತೀರಾದರೆ ಅದಕ್ಕೆ ನಿರ್ದಿಷ್ಟ ಶುಲ್ಕವನ್ನು ಕೆಲವು ಬ್ಯಾಂಕ್​ಗಳು ಹೊಂದಿರುತ್ತವೆ. ಅಲ್ಲದೆ ಕಂತು ಪಾವತಿ ವಿಳಂಬವಾಗಿದ್ದಕ್ಕೂ ಶುಲ್ಕ ವಿಧಿಸಲಾಗುತ್ತದೆ. ಅವಧಿ ಮೀರಿದ ನಂತರ ಕಂತು ಪಾವತಿಗೆ ಕನಿಷ್ಠ 500 ರೂ. ವಿಧಿಸುವ ಬ್ಯಾಂಕುಗಳೂ ಇವೆ. ಇದಲ್ಲದೆ ಫ್ಲೋಟಿಂಗ್ ಬಡ್ಡಿ ದರದಿಂದ ಫಿಕ್ಸೆಡ್ ಬಡ್ಡಿ ದರಕ್ಕೆ ಬದಲಾಗಲು, ಮರುಪಾವತಿ ವಿಧಾನವನ್ನು ಇಸಿಎಸ್​ನಿಂದ ಚೆಕ್​ಗೆ ಅಥವಾ ಚೆಕ್​ನಿಂದ ಇಸಿಎಸ್​ಗೆ ಬದಲಿಸಲು, ಸಾಲ ಪಡೆಯುವಾಗ ನೀಡಲಾಗಿದ್ದ ದಾಖಲಾತಿಗಳನ್ನು ಹಿಂಪಡೆಯಲು, ಚೆಕ್ ಬೌನ್ಸ್ ಆದರೆ, ನಿರಾಕ್ಷೇಪಣಾ ಪತ್ರದ ನಕಲು ಪ್ರತಿ ನೀಡಲು (ಎನ್​ಒಸಿ) ಬ್ಯಾಂಕ್​ಗಳು ಶುಲ್ಕ ವಿಧಿಸುತ್ತವೆ. ಈ ಎಲ್ಲ ಶುಲ್ಕಗಳೂ 100 ರೂ.ನಿಂದ 500 ಅಥವಾ 1,000 ರೂ.ಗಳವರೆಗೂ ಇರಬಹುದು. ಸಾಲ ಪಡೆಯುವಾಗಲೇ ಕೆಲವು ಎಕ್ಸಿಕ್ಯೂಟಿವ್​ಗಳು ಈ ವಿವರವನ್ನು ನೀಡುತ್ತಾರೆ. ಇಲ್ಲವಾದರೆ ಬಹುತೇಕ ಎಲ್ಲ ಬ್ಯಾಂಕ್​ಗಳೂ ಶುಲ್ಕಗಳ ವಿವರಗಳುಳ್ಳ ಕೈಪಿಡಿಯನ್ನು
ಮುದ್ರಿಸುತ್ತದೆ. ಇವುಗಳನ್ನು ತಂದು ಮನೆಯಲ್ಲಿ ಕುಳಿತು ಸಮಾಧಾನದಿಂದ ಲೆಕ್ಕ ಹಾಕಿಕೊಳ್ಳಿ. ಸಾಮಾನ್ಯವಾಗಿ ಈಗಿನ ದೀರ್ಘಾವಧಿ ಸಾಲಗಳಿಗೆ ಬಡ್ಡಿ ದರ ಬದಲಾಗುತ್ತಿರುತ್ತದೆ. ಎಂಸಿಎಲ್​ಆರ್ ಎಂಬ ಸೂತ್ರವನ್ನು ಅಳವಡಿಸಲಾಗಿದ್ದು, ಪ್ರತಿ ವರ್ಷವೂ ಬಡ್ಡಿ ದರವನ್ನು ಬದಲಿಸಲಾಗುತ್ತದೆ. ಹೀಗಾಗಿ ಗೃಹ ಸಾಲ ತೆಗೆದುಕೊಂಡಿದ್ದರೆ ಪ್ರತಿ ವರ್ಷವೂ ಬಡ್ಡಿ ದರವನ್ನು ಪರಿಶೀಲಿಸುತ್ತಿರಬೇಕು. ಬಡ್ಡಿ ದರದ ಹೊರತಾಗಿ ಕಾಣದಿರುವ ಹಲವು ಶುಲ್ಕಗಳ ಬಗ್ಗೆ ಅರಿವಿಲ್ಲದೇ ಸಾಲ ತೆಗೆದುಕೊಂಡರೆ, ಸಾಲದ ಮೊತ್ತದಿಂದ ಪಡೆದ ಸೌಲಭ್ಯದ ನಿಜವಾದ ಖುಷಿಯೇ ಹೊರಟುಹೋದೀತು.

ಕ್ಯೂಆರ್ ಕೋಡ್

image

ಕ್ಯೂಆರ್‌ ಕೋಡ್‌: ಜಾಲಜಗತ್ತಿಗೆ ಇ-ಚಿತ್ರ ಕೊಂಡಿ

@ ದಯಾನಂದ     
ಸ್ಮಾರ್ಟ್‌ಫೋನ್‌ನಿಂದ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಮಾಹಿತಿ ಮೂಲಕ್ಕೆ ಹೋಗುವುದು ಈಗ ಸುಲಭ. ಜಾಹೀರಾತು ಜಗತ್ತಿನಿಂದ ಹಿಡಿದು ಸಾಮಾಜಿಕ ಜಾಲತಾಣಗಳ ಯುಆರ್‌ಎಲ್‌ ಕೊಂಡಿಗಳ ಸಂಕೇತ ವಾಹಕವಾಗಿ ಕೆಲಸ ಮಾಡುತ್ತಿರುವ ಪುಟ್ಟ ಪುಟ್ಟ ಕಪ್ಪು ಚೌಕಗಳ ಸಮೂಹ ಈ ಕ್ಯೂಆರ್‌ ಕೋಡ್‌.

ವೆಬ್‌ಸೈಟ್‌, ಫೇಸ್‌ಬುಕ್‌, ಟ್ವಿಟರ್‌, ಯೂಟ್ಯೂಬ್‌ ಸೇರಿದಂತೆ ಯಾವುದೇ ಜಾಲತಾಣಗಳನ್ನು ಸುಲಭವಾಗಿ ಜಾಲಾಡಲು ಕ್ಯೂಆರ್‌ ಕೋಡ್‌ ಸಹಕಾರಿ. ಕ್ಯೂಆರ್‌ ಕೋಡ್‌ ಒಂದಿದ್ದರೆ ಕ್ಷಣ ಮಾತ್ರದಲ್ಲಿ ನಿರ್ದಿಷ್ಟ ಜಾಲತಾಣಕ್ಕೆ ಲಗ್ಗೆ ಹಾಕಲು ಸಾಧ್ಯ.

ಇದಕ್ಕಾಗಿ ನಿಮ್ಮಲ್ಲಿ ಇರಬೇಕಾದ್ದು ಸ್ಮಾರ್ಟ್‌ಫೋನ್‌ ಮತ್ತು ಅದರಲ್ಲಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಬಲ್ಲ ಯಾವುದೇ ಆ್ಯಪ್‌.

ಕಪ್ಪು ಚೌಕಗಳ ತನ್ನ ಪುಟ್ಟ ಹೊಟ್ಟೆಯಲ್ಲಿ ಜಾಲಜಗತ್ತಿನ ಕೊಂಡಿಗಳನ್ನು ಅಡಗಿಸಿಕೊಳ್ಳುವ ವಿಶಿಷ್ಟ ಇ-ಚಿತ್ರ ಸಂಕೇತವೇ ಕ್ಯೂಆರ್‌ ಕೋಡ್‌. ಕ್ವಿಕ್‌ ರೆಸ್ಪಾನ್ಸ್‌ ಕೋಡ್‌ನ ಹೆಸರನ್ನು ಚಿಕ್ಕದಾಗಿಸಿ ಕ್ಯೂಆರ್‌ ಕೋಡ್‌ ಎಂದು ಕರೆಯುವುದೇ ಹೆಚ್ಚು ರೂಢಿ.

ಉದ್ಯಮದ ಖಾಸಗಿ ಬಳಕೆಗೆಂದು ಆವಿಷ್ಕಾರಗೊಂಡ ಈ ಕೋಡ್‌ ಈಗ ಬಳಕೆದಾರಸ್ನೇಹಿಯಾಗಿ ಬೇಕೆಂದ ರೀತಿಯಲ್ಲೆಲ್ಲಾ ಉಪಯೋಗಕ್ಕೆ ಬರುತ್ತಿದೆ. ಸ್ಮಾರ್ಟ್‌ಫೋನಿಗರಿಗೆ ಯುಆರ್‌ಎಲ್‌ ಟೈಪಿಸುವುದನ್ನು ಹೆಚ್ಚೂ ಕಡಿಮೆ ಇಲ್ಲವಾಗಿಸುವತ್ತ ಕ್ಯೂಆರ್‌ ಕೋಡ್‌ನ ಬಳಕೆ ಹೆಚ್ಚುತ್ತಿದೆ.

ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಜಾಲತಾಣಕ್ಕೆ ಭೇಟಿ ನೀಡುವುದು ಇದರ ಒಂದು ಉಪಯೋಗವಾದರೆ, ನಿಮ್ಮ ಸಾಮಾಜಿಕ ಜಾಲತಾಣ ಅಥವಾ ನಿರ್ದಿಷ್ಟ ಪೇಜ್‌ನ ಲಿಂಕ್‌ಗಾಗಿ ಕ್ಯೂಆರ್‌ ಕೋಡ್‌ ತಯಾರಿಸುವುದು ಇದರ ಮತ್ತೊಂದು ಅನುಕೂಲ. ನೀವು ಬೇಕೆಂದ ಲಿಂಕ್‌ನ ಕ್ಯೂಆರ್‌ ಕೋಡ್‌ ತಯಾರಿಸುವುದು ಈಗ ನಿಮಿಷದ ಕೆಲಸ. ಜತೆಗೆ ಇದು ಉಚಿತವೂ ಕೂಡ.

ಕ್ಯೂಆರ್‌ ಕೋಡ್‌ ತಯಾರಿಸುವ ಹಲವು ಉಚಿತ ಜಾಲತಾಣಗಳು ಲಭ್ಯವಿವೆ. ಮೊದಲು ಕ್ಯೂಆರ್‌ ಕೋಡ್‌ ಜನರೇಟರ್‌ನ ಯಾವುದೇ ಜಾಲತಾಣಕ್ಕೆ ಭೇಟಿ ನೀಡಿ.

ನೀವು ಹಂಚಿಕೊಳ್ಳಬೇಕಿರುವ ನಿರ್ದಿಷ್ಟ ವೆಬ್‌ಪೇಜ್‌ನ ಯುಆರ್‌ಎಲ್‌ ಕಾಪಿ ಮಾಡಿ ಕ್ಯೂಆರ್‌ ಕೋಡ್‌ ಜನರೇಟರ್‌ನಲ್ಲಿ ಕೇಳುವ ಯುಆರ್‌ಎಲ್‌ ಲಿಂಕ್‌ನ ಜಾಗಕ್ಕೆ ಪೇಸ್ಟ್‌ ಮಾಡಿ.

ಇದಾದ ಬಳಿಕ ಕ್ಯೂಆರ್‌ ಕೋಡ್‌ಗೆ ನೀವು ಬಯಸುವ ಬಣ್ಣ ಮತ್ತು ಗಾತ್ರದ ಆಯ್ಕೆ ಮಾಡಿ ಕ್ರಿಯೇಟ್‌  ಕ್ಯೂಆರ್‌ ಕೋಡ್‌ ಎಂಬಲ್ಲಿ ಕ್ಲಿಕ್ಕಿಸಿ. ರಚನೆಗೊಂಡ ಇ-ಚಿತ್ರವನ್ನು ಸೇವ್‌ ಮಾಡಿಕೊಳ್ಳಿ. ಈಗ ನಿಮ್ಮದೇ ಆದ ಕ್ಯೂಆರ್‌ ಕೋಡ್‌ ಬಳಕೆಗೆ ಸಿದ್ಧ.

ಕ್ಯೂಆರ್‌ ಕೋಡ್‌ಗೆ ಬೇಕೆಂದ ಬಣ್ಣ ಆಯ್ಕೆ ಮಾಡಿಕೊಳ್ಳುವ ಜತೆಗೆ ನಿಮ್ಮದೇ ಆದ ಲೋಗೊ ಇಲ್ಲವೇ ಭಾವಚಿತ್ರ ಹಾಕಿಕೊಳ್ಳುವ ಅವಕಾಶವೂ ಇದೆ. ಭಾವಚಿತ್ರದ ಮೇಲೆಯೇ ಪಾರದರ್ಶಕ ಕ್ಯೂಆರ್‌ ಕೋಡ್‌ ರಚಿಸಿಕೊಳ್ಳುವುದೂ ಸಾಧ್ಯ.

ಕ್ಯೂಆರ್‌ ಕೋಡ್‌ ರಚಿಸುವ ಕೆಲ ಜಾಲತಾಣಗಳ ಕೊಂಡಿ ಇಲ್ಲಿದೆ. http://www.qrcode-monkey.com

http://www.visualead.com

http://www.the-qrcode-generator.com