ಕೆಲವು ಪದಗಳ ವಾಸ್ತವಿಕ ಅರ್ಥಗಳು. 

.
*ಹುಟ್ಟು:* ನಾವು ಕೇಳದೇ ಸಿಗುವ ವರ(ಶಾಪ)*ಸಾವು:* ನಾವು ಹೇಳದೇ ಹೋಗುವ ಜಾಗ.

*ಬಾಲ್ಯ:* ಮೈಮರೆತು ಆಡುವ ಸ್ವರ್ಗ.

*ಯೌವನ:* ಅರಿವಿದ್ದರೂ ಅರಿಯದ ಮಾಯೆ.

*ಮುಪ್ಪು:* ಕಡೆಯ ಆಟ.

*ಸ್ನೇಹ:* ಶಾಶ್ವತವಾಗಿ ಉಳಿಯೋ ಬಂಧ.

*ಪ್ರೀತಿ:* ಪ್ರಾಣಕ್ಕೆ ಹಿತವಾದ ಅನುಬಂಧ.

*ಪ್ರೇಮ:* ತ್ಯಾಗಕ್ಕೆ ಸ್ಪೂರ್ತಿ.

*ಕರುಣೆ:* ಕಾಣುವ ದೇವರು.

*ಮಮತೆ:* ಕರುಳಿನ ಬಳ್ಳಿ.

*ದ್ವೇಷ:* ಉರಿಯುವ ಕೊಳ್ಳಿ.

*ತ್ಯಾಗ:* ದೀಪ.

*ಉಸಿರು:* ಮೌನದಲೆ ಜೊತೆಗಿರುವ ಗೆಳೆಯ.

*ಹ್ರದಯ:* ಎಚ್ಚರಿಕೆ ಗಂಟೆ.

*ಕಣ್ಣು:* ಸ್ರಷ್ಟಿಯ ಕನ್ನಡಿ.

*ಮಾತು:* ಬೇಸರ ನೀಗುವ ವಿದ್ಯೆ.

*ಮೌನ:* ಭಾಷೆಗೂ ನಿಲುಕದ ಭಾವ.

*ಕಣ್ಣೀರು:* ಅಸ್ತ್ರ

*ನೋವು:* ಅಸಹಾಯಕತೆ

*ನಗು:* ಔಷಧಿ.

*ಹಣ:* ಅವಶ್ಯಕತೆ.

*ಗುಣ:* ಆಸ್ತಿ.

*ಕಲೆ:* ಜ್ಞಾನ.

*ಧರ್ಮ:* ಬುನಾದಿ.

*ಕರ್ಮ:* ಕಾಣದಾ ಕೈ ಆಟ.

*ಕಾಯಕ:* ದೇಹ, ಮನಸಿಗೆ ಮಿತ್ರ.

*ಸಂಸ್ಕೃತಿ:* ನೆಲೆ

*ಸಾಧನೆ:* ಜೀವಕ್ಕೆ ಜೀವನಕ್ಕೆ ಬೆಲೆ.

ಸಂಪ್ರದಾಯ ಮತ್ತು ಪರಂಪರೆ

ಅರಿವು ಮತ್ತು ಆಚಾರ ಇವು ಯಾವುದೇ ಜನರ-ದೇಶದ ಅವಿಭಾಜ್ಯ ಅಂಗ. ಆಚಾರದಲ್ಲಿ ಹೇಳದಿದ್ದರೂ ಅರಿವು ಅಡಗಿರುತ್ತದೆ. ಕೆಲವೊಮ್ಮೆ ಅದು ವಿವರಣೆಗೆ ಸಿಗಬಹುದು; ಹಲವು ಸಲ ಸಿಗದೆ ಹೋಗಬಹುದು. ಹಾಗೆಂದ ಮಾತ್ರಕ್ಕೆ ಆಚರಣೆಗೆ ಅರ್ಥವೇ ಇಲ್ಲ ಎಂದಲ್ಲ. ಇದೆ, ಇತ್ತು, ನಮ್ಮ ಕೈಗೆ ಸಿಕ್ಕುತ್ತಿಲ್ಲ, ಅಥವಾ ನಮ್ಮ ಕಾಲದ ಜನರಿಗೆ ಸಿಗುತ್ತಿಲ್ಲ ಎಂದು ತಿಳಿದುಕೊಳ್ಳಬೇಕು. ಆಗ ನಮ್ಮ ಹಳಬರ, ಅವರಿಗಿಂತ ಸಾವಿರಾರು ವರ್ಷ ಹಳಬರ ಮತ್ತು ಈಗಿನ ಆಚರಣೆಗಳು ಎಷ್ಟು ಅರ್ಥಪೂರ್ಣ ಎಂಬುದು ಅರಿವಾಗುತ್ತದೆ. ಅರಿವು ಬೇರು, ಆಚಾರ ಹೂವು. ಬೇರಿಲ್ಲದೆ ಹೂವಿಲ್ಲ ಎಂದು ತಿಳಿದುಕೊಂಡರೆ ಸಾಕು. ಉದಾಹರಣೆಗಳ ಮೂಲಕ ಈ ವಿಷಯವನ್ನು ನೂರಾರು ಮುಖಗಳಲ್ಲಿ ವಿವರಿಸಿ, ವ್ಯಾಖ್ಯಾನ ಮಾಡಬಹುದು. ಆದರೆ ಆರಂಭದಲ್ಲಿ ತಿಳಿಯಬೇಕಾದ ವಿಷಯವೊಂದಿದೆ. ಅದೆಂದರೆ ಪರಂಪರೆ ಬೇರೆ, ಸಂಪ್ರದಾಯ ಬೇರೆ. ಯಾವುದು ಒಂದು ಭೂಪ್ರದೇಶದಲ್ಲಿ ಇರುತ್ತದೋ ಅದೆಲ್ಲ ನಮಗೆ ಬೇಕೋ ಬೇಡವೋ ‘ಪರಂಪರೆ’ ಆಗುತ್ತದೆ. ಇದನ್ನು ಇಂಗ್ಲಿಷ್​ನಲ್ಲಿ ಹೆರಿಟೇಜ್ ಎನ್ನುತ್ತಾರೆ. ಅಂದರೆ ಬಂದದ್ದು ಎಂದು ಅರ್ಥ. ಯಾವುದನ್ನು ನಾವು ಮನಃಪೂರ್ವಕವಾಗಿ ಪ್ರೀತಿ- ಶ್ರದ್ಧೆಯಿಂದ ಒಪ್ಪಿದ್ದೇವೆಯೋ ಅದು ‘ಸಂಪ್ರದಾಯ’ವಾಗುತ್ತದೆ. ಇದನ್ನು ಇಂಗ್ಲಿಷ್​ನಲ್ಲಿ ಟ್ರಡಿಷನ್ ಎನ್ನುತ್ತಾರೆ. ಗಂಡ ಸತ್ತಾಗ ಹೆಂಡತಿಯು ಬಳೆ, ಕುಂಕುಮ ತೆಗೆಸುವುದು ಪರಂಪರೆಯ ಭಾಗವಿರಬಹುದು, ಆದರೆ ಆಚರಿಸದೆ ಇದ್ದಾಗ ಅದು ಸಂಪ್ರದಾಯವೆನಿಸದು. ಪರಂಪರೆ ಯಾಂತ್ರಿಕವಾದೀತು, ಸಂಪ್ರದಾಯ ಸಂವೇದನೆಯ ಭಂಡಾರ.