ಹೋಳಿ ಹಬ್ಬದ ಮಹತ್ವ

ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ದೇಶ. ಇಲ್ಲಿ ನಾನಾ ಹಬ್ಬ-ಹರಿದಿನಗಳ ಆಚರಣೆ ಇದೆ. ಅದರಲ್ಲಿ ಹೋಳಿ ಹಬ್ಬ ಒಂದು ರೀತಿ ತುಂಬಾನೇ ಸ್ಪೆಷಲ್. ಯಾಕೆಂದ್ರೆ, ಈ ಹಬ್ಬದಲ್ಲಿ ಬಣ್ಣಗಳ ಜೊತೆ ಆಟ ಆಡಲು ಹಿರಿಯರು-ಕಿರಿಯರು ಅನ್ನೋ ಬೇಧವಿಲ್ಲದೇ ಪ್ರತಿಯೊಬ್ಬರು ಖುಷಿಯಾಗಿ ಪಾಲ್ಗೊಳ್ಳುತ್ತಾರೆ.ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಮಾತ್ರ ಆಚರಣೆಯಲ್ಲಿದ್ದ ಹೋಳಿ ಹಬ್ಬ ಇದೀಗ ಭಾರತದಾದ್ಯಂತ ಪ್ರಚಲಿತದಲ್ಲಿದೆ. ಮೋಜು-ಮಸ್ತಿಗಾಗಿ ಆಡುವ ಬಣ್ಣದೋಕುಳಿ ಇದೀಗ ಭಾರತದಲ್ಲೇ ದೊಡ್ಡ ಫ್ಯಾಷನ್ ಆಗ್ಬಿಟ್ಟಿದೆ. ಇನ್ನು ಈ ಹಬ್ಬಕ್ಕೆ ಯಾವುದೇ ರಿತೀಯ ವಯಸ್ಸಿನ ಮಿತಿಯಿಲ್ಲ. ಹಿರಿಯರು- ಕಿರಿಯರು ಅನ್ನದೇ ಪ್ರತಿಯೊಬ್ಬರು ಖುಷಿ-ಖುಷಿಯಾಗಿ ಹೋಳಿ ಸಂಭ್ರಮಾಚರಣೆ ಮಾಡುತ್ತಾರೆ. ವಿವಿಧ ಬಣ್ಣಗಳ ಓಕುಳಿ ಹರಿಸಿ, ಇಡೀ ವರ್ಷ ಸಂತೋಷದ ಕೋಡಿಯೇ ಹರಿಯಲಿ ಅಂತ ಹಾರೈಸುವ ರಂಗಿನ ಹಬ್ಬ ಇದು.

ಹೋಳಿ ಹಬ್ಬವನ್ನು ಕಾಮನ ಹಬ್ಬ ಅಂತಲೂ ಕರೆಯಲಾಗುತ್ತೆ. ಈ ಹಬ್ಬದ ಆಚರಣೆಯ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆಯಿದೆ. ತಾರಕಾಸುರನೆಂಬ ರಾಕ್ಷಸನು ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿ, ತನಗೆ ಸಾವು ಬಾರದಂತೆ ಅನುಗೃಹಿಸು ಅಂತ ವರ ಬೇಡುತ್ತಾನೆ. ಅದಕ್ಕೆ ಬ್ರಹ್ಮ ಸಾವು ಎಲ್ಲರಿಗೂ ನಿಶ್ಚಿತ. ಸಾವು ಬಾರದಂತೆ ತಡೆಯಲು ಸಾಧ್ಯವಿಲ್ಲ ಅಂತ ಹೇಳುತ್ತಾನೆ. ಆಗ ತಾರಕಾಸುರನು ಶಿವನಿಗೆ ಏಳು ದಿನದಲ್ಲಿ ಜನಿಸಿದ ಮಗನಿಂದಲೇ ನನಗೆ ಸಾವು ಬರುವಂತೆ ಮಾಡು ಎಂದು ವರ ಬೇಡುತ್ತಾನೆ.ಅದಕ್ಕೆ ಬ್ರಹ್ಮ ಒಪ್ಪಿ ವರ ನೀಡುತ್ತಾನೆ.
ಬ್ರಹ್ಮನಿಂದ ವರ ಪಡೆದ ತಾರಕಾಸುರ ಅಹಂಕಾರದಿಂದ ಲೋಕದೆಲ್ಲಡೆ ಉಪಟಳ ನೀಡುತ್ತಿರುತ್ತಾನೆ. ಇವನ ಕಾಟಕ್ಕೆ ಸುಸ್ತಾದ ದೇವತೆಗಳೆಲ್ಲ ಸಹಾಯ ಕೋರಿ ಶಿವನಲ್ಲಿಗೆ ಓಡೋಡಿ ಹೋಗುತ್ತಾರೆ. ಆಗ ಶಿವನು ಭೋಗಸಮಾಧಿಯಲ್ಲಿ ತಪಸ್ಸು ಮಾಡ್ತಿರುತ್ತಾನೆ. ಶಿವ ಭೋಗಸಮಾಧಿಯಿಂದ ಎದ್ದು ಪಾರ್ವತಿ ಜೊತೆ ಮೋಹಗೊಂಡು ಸೇರುವಂತೆ ಮಾಡಲು ದೇವತೆಗಳೆಲ್ಲರೂ ಸೇರಿ ರತಿ ಮನ್ಮಥರನ್ನು ಒಪ್ಪಿಸುತ್ತಾರೆ.ಈ ಪುಣ್ಯಕಾರ್ಯ ಮಾಡಲು ರತಿ ಮನ್ಮಥರು ಒಪ್ಪುತ್ತಾರೆ. ಅದರಂತೆ ತರಿ-ಮನ್ಮಥರು ಧ್ಯಾನಸ್ಥ ಸ್ಥಿತಿಯಲ್ಲಿದ್ದ ಮಹಾದೇವನ ಎದುರು ನೃತ್ಯ ಮಾಡಿ, ಹೂವಿನ ಬಾಣ ಬಿಟ್ಟು ಶಿವನ ಧ್ಯಾನಕ್ಕೆ ಭಂಗ ತರುತ್ತಾರೆ. ಇದರಿಂದ ಕುಪಿತಗೊಂಡ ಶಿವ, ತನ್ನ ಮೂರನೇ ಕಣ್ಣಿನಿಂದ ಮನ್ಮಥನನ್ನು ಸುಟ್ಟುಬಿಡುತ್ತಾನೆ. ನಂತರ ರತಿ ಪತಿ ಭಿಕ್ಷೆ ಬೇಡಿದಾಗ ಅವಳಿಗೆ ಮಾತ್ರ ಮನ್ಮಥ ಕಾಣುವಂತೆ ವರ ನೀಡುತ್ತಾನೆ.ಈ ಮನ್ಮಥನಿಗೆ ಕಾಮ ಎಂಬ ಹೆಸರೂ ಕೂಡ ಇದೆ. ಹೀಗಾಗಿ ಕಾಮ ಶಿವನ ಕೆಂಗಣ್ಣಿಗೆ ಗುರಿಯಾಗಿ ಸುಟ್ಟು ಹೋದ ದಿನವನ್ನು ಕಾಮನ ಹಬ್ಬವಾಗಿ ಆಚರಿಸುತ್ತಾರೆ. ಈ ಕಾಮನ ಹಬ್ಬದ ದಿನದಂದೇ ಹೋಳಿ ಹಬ್ಬ ಆಚರಿಸಲಾಗುತ್ತೆ.

Leave a comment