ಭಾರತಕ್ಕೆ ಮತ್ತೊಂದು ವಿಶ್ವಸುಂದರಿ ಪಟ್ಟ.

ಹರಿಯಾಣ ಕುವರಿ ವಿಶ್ವಸುಂದರಿ.1

ಸನ್ಯಾ: ಚೀನಾದಲ್ಲಿ ನಡೆದ 2017ರ ವಿಶ್ವಸುಂದರಿ ಸ್ಪರ್ಧೆಯಲ್ಲಿ 108 ಸ್ಪರ್ಧಿಗಳನ್ನು ಹಿಂದಿಕ್ಕಿ ಹರಿಯಾಣದ ಮಾನುಷಿ ಛಿಲ್ಲರ್ ವಿಶ್ವಸುಂದರಿ-2017 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ವೈದ್ಯ ದಂಪತಿಯ ಪುತ್ರಿಯಾದ 21 ವರ್ಷದ ಮಾನುಷಿ 2017ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜೇತೆಯಾಗಿದ್ದರು.

2016ರ ವಿಶ್ವ ಸುಂದರಿ ಸ್ಟೇಫಾನಿ ಡೆಲ್ ವ್ಯಾಲೆ ಮಾನುಷಿಗೆ ವಿಶ್ವಸುಂದರಿ ಕಿರೀಟ ತೊಡಿಸಿದರು. 16 ವರ್ಷದ ಬಳಿಕ ವಿಶ್ವಸುಂದರಿ ಕಿರೀಟ ಧರಿಸಿದ 6ನೇ ಮಹಿಳೆಯಾಗಿ ಮಾನುಷಿ ಹೊಮ್ಮಿದ್ದಾರೆ. 2000ದಲ್ಲಿ ನಟಿ ಪ್ರಿಯಾಂಕ ಚೋಪ್ರಾ ಈ ಕೀರ್ತಿಗೆ ಪಾತ್ರರಾಗಿದ್ದರು. ‘ಪ್ರಪಂಚದಲ್ಲಿ ಯಾರಿಗೆ ಹೆಚ್ಚು ಸಂಬಳ ನೀಡಬೇಕು?’ ಎಂದು ಸ್ಪರ್ಧೆಯಲ್ಲಿ ಕೇಳಲಾದ ಪ್ರಶ್ನೆಗೆ- ‘ತಾಯಿಗೆ’ ಎಂದ ಮಾನುಷಿ, ನಾವು ಪಡೆಯುವ ವೇತನಕ್ಕಿಂತ ಹೆಚ್ಚಾಗಿ ಪ್ರೀತಿ ಹಾಗೂ ಗೌರವ ಸಂಪಾದಿಸಬೇಕು. ಇದು ಕೇವಲ ತಾಯಿಯಿಂದ ಮಾತ್ರ ಸಾಧ್ಯ. ತಾಯಂದಿರು ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಹಾಗಾಗಿ ನಾವು ಅವರಿಗೆ ಹೆಚ್ಚು ಗೌರವ ನೀಡಬೇಕು’ ಎಂದು ಉತ್ತರಿಸಿದ್ದರು. ಮಾನುಷಿಯ ತಂದೆ ಡಾ. ಮಿತ್ರಾ ಬಸು ಛಿಲ್ಲರ್ ಹರಿಯಾಣದ ಡಿಆರ್​ಡಿಒನಲ್ಲಿ ಓರ್ವ ವಿಜ್ಞಾನಿಯಾಗಿದ್ದರೆ, ಅಮ್ಮ ಡಾ. ನೀಲಂ ಛಿಲ್ಲರ್ ಇನ್​ಸ್ಟಿಟ್ಯೂಟ್ ಆಫ್ ಹ್ಯೂಮನ್ ಬಿಹೇವಿಯರ್ ಆಂಡ್ ಅಲೈಡ್ ಸೈನ್ಸಸ್​ನಲ್ಲಿನ ನ್ಯೂರೋಕೆಮಿಸ್ಟ್ರಿ ವಿಭಾಗದಲ್ಲಿ ಸಹ ಪ್ರಾಧ್ಯಾಪಕಿಯಾಗಿದ್ದಾರೆ.

ನವದೆಹಲಿಯ ಸೇಂಟ್ ಥಾಮಸ್ ಶಾಲೆಯಲ್ಲಿ ಅಧ್ಯಯನ ಮಾಡಿದ ಮಾನುಷಿ, ಸೋನಿಪತ್​ನಲ್ಲಿರುವ ಭಗತ್ ಫೂಲ್ ಸಿಂಗ್ ಮಹಿಳಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಶಿಕ್ಷಣವನ್ನು ಮುಂದುವರಿಸಿದ್ದಾರೆ. ಈಕೆ ಪರಿಣತ ಕೂಚಿಪುಡಿ ನೃತ್ಯಗಾತಿಯೂ ಹೌದು. ರಾಜಾ ಮತ್ತು ರಾಧಾ ರೆಡ್ಡಿ ಹಾಗೂ ಕೌಶಲ್ಯಾ ರೆಡ್ಡಿಯವರಂಥ ಪ್ರಸಿದ್ಧ ನೃತ್ಯ ಕಲಾವಿದರು ಮಾನುಷಿಗೆ ನೃತ್ಯಪಾಠ ಹೇಳಿದವರಲ್ಲಿ ಪ್ರಮುಖರು. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮದಲ್ಲೂ ಸಕ್ರಿಯರಾಗಿದ್ದಾಕೆ.

2017ರ ಜೂನ್ 25ರಂದು ಫೆಮಿನಾ ಮಿಸ್ ಇಂಡಿಯಾ 2017 ಸ್ಪರ್ಧೆಯಲ್ಲಿ ಹರಿಯಾಣ ರಾಜ್ಯವನ್ನು ಮಾನುಷಿ ಪ್ರತಿನಿಧಿಸಿದ್ದರು. ಈ ಸ್ಪರ್ಧೆಯಲ್ಲಿ ಅವರಿಗೆ ‘ಮಿಸ್ ಫೋಟೋಜೆನಿಕ್’ ಕಿರೀಟ ದಕ್ಕಿದ್ದರ ಜತೆಗೆ ಸ್ಪರ್ಧೆಯಲ್ಲೂ ಗೆಲುವಿನ ನಗೆ ಬೀರಿದರು.

ಮಿಸ್​ವರ್ಲ್ಡ್ ಗೆದ್ದ ಭಾರತ ನಾರಿಯರು

1966 – ರೀತಾ ಫರಿಯಾ

1994 – ಐಶ್ವರ್ಯಾ ರೈ

1997 – ಡಯಾನಾ ಹೇಡನ್

1999 – ಯುಕ್ತಾ ಮುಖಿ

2000 – ಪ್ರಿಯಾಂಕಾ ಚೋಪ್ರಾ

2017 – ಮಾನುಷಿ ಛಿಲ್ಲರ್.