ಇ–ಫೈಲಿಂಗ್‌: ‘ಫಾರಂ 16’ ಬಳಕೆ ಹೇಗೆ?

ಇ–ಫೈಲಿಂಗ್‌: ‘ಫಾರಂ 16’ ಬಳಕೆ ಹೇಗೆ?

6 Jul, 2016
@ ಅರ್ಚಿತ್‌ ಗುಪ್ತ ಮತ್ತು ಆನಂದ್‌ ಧೆಲಿಯಾ.
  
ಮಾಸಿಕ ವೇತನ ಪಡೆಯುವವರು ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟಿದ್ದರೆ, ಪ್ರತಿ ವರ್ಷ ಜುಲೈ ತಿಂಗಳಲ್ಲಿ ತಮ್ಮ ಆದಾಯ ತೆರಿಗೆ ಲೆಕ್ಕಪತ್ರ (ಐ.ಟಿ ರಿಟರ್ನ್ಸ್‌) ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಇದಕ್ಕೆ ಉದ್ಯೋಗದಾತರು ನೀಡುವ ‘ಫಾರಂ ನಂಬರ್‌ 16’ ಆಧರಿಸಿ ‘ಇ–ಫೈಲಿಂಗ್‌’ ಮಾಡುವ ಅಗತ್ಯವನ್ನು ಅರ್ಚಿತ್‌ ಗುಪ್ತ  ಮತ್ತು ಆನಂದ್‌ ಧೆಲಿಯಾ ಅವರು ಇಲ್ಲಿ ವಿವರಿಸಿದ್ದಾರೆ.

ಉದ್ಯೋಗದಲ್ಲಿದ್ದು, ಸಂಬಳದ ರೂಪದಲ್ಲಿ ಆದಾಯ ಪಡೆಯುತ್ತಿರುವವರಿಗೆ ‘ಫಾರಂ ನಂಬರ್‌ 16’ ಅತ್ಯಂತ ಮುಖ್ಯ ದಾಖಲೆ. ಉದ್ಯೋಗದಾತರಿಂದ  ಉದ್ಯೋಗಿಗಳು ಪಡೆಯುವ ಈ ದಾಖಲೆ ನಿಜವಾಗಿಯೂ ಒಂದು ಪ್ರಮಾಣಪತ್ರ.

ಈ ‘ಫಾರಂ 16’  ಅನ್ನು ಉದ್ಯೋಗ ನೀಡಿದ್ದಕ್ಕೆ ಮತ್ತು ಮಾಡಿದ ಕೆಲಸಕ್ಕೆ ಪಡೆಯುವ ವೇತನಕ್ಕೆ ಪುರಾವೆ ಎಂದೂ ನಾವು ಭಾವಿಸಬಹುದು. ಒಂದು ನಿರ್ದಿಷ್ಟ ಅವಧಿಗೆ ಉದ್ಯೋಗದಾತರಿಂದ ಸಂಬಳ ಪಡೆದಿದ್ದೀರಿ ಮತ್ತು ಮಾಲೀಕರು  ನೀಡಿದ ಸಂಬಳದಲ್ಲಿ ಮೂಲದಲ್ಲಿಯೇ ತೆರಿಗೆ ಕಡಿತ ಮಾಡಿಕೊಂಡಿದ್ದಾರೆ (ಟಿಡಿಎಸ್‌) ಎಂಬುದನ್ನು ಇದು ಪ್ರಮಾಣೀಕರಿಸುತ್ತದೆ.

ವೇತನ ಪಡೆಯುವ ಉದ್ಯೋಗಿಗಳು ಹಣಕಾಸು ವರ್ಷ ಕೊನೆಗೊಂಡ ಬಳಿಕ ವರ್ಷಕ್ಕೆ ಒಮ್ಮೆ ಈ ‘ಫಾರಂ 16’ ಪಡೆಯುತ್ತಾರೆ. ಸಾಮಾನ್ಯವಾಗಿ ಮೇ ಅಥವಾ ಜೂನ್‌ನಲ್ಲಿ ಈ ‘ಫಾರಂ 16’ ಉದ್ಯೋಗಿಗಳ ಕೈಸೇರುತ್ತದೆ.

ಆದಾಯ ತೆರಿಗೆ ಲೆಕ್ಕಪತ್ರ  (ಐ.ಟಿ ರಿಟರ್ನ್ಸ್‌) ಸಲ್ಲಿಸುವ ಒಂದೆರಡು ತಿಂಗಳ ಮೊದಲೇ ‘ಫಾರಂ 16’  ಬಗ್ಗೆ ಮಾತು ಕೇಳಿ ಬರತೊಡಗುತ್ತವೆ. ತೆರಿಗೆ ರಿಟರ್ನ್ಸ್‌ನಲ್ಲಿ ಭರ್ತಿ ಮಾಡಬೇಕಾದ ಬಹುತೇಕ ಎಲ್ಲ ಮಾಹಿತಿಗಳು ಈ ‘ಫಾರಂ 16’ ನಲ್ಲಿ ಇರುತ್ತದೆ.

‘ಫಾರಂ 16’ನಲ್ಲಿ ‘ಎ’ ಮತ್ತು ‘ಬಿ’ ಎಂಬ ಎರಡು ವಿಭಾಗಗಳಿವೆ. ‘ಎ’ ವಿಭಾಗದಲ್ಲಿ ಉದ್ಯೋಗದಾತರ ವಿವರ,   ಸಂಸ್ಥೆಯಲ್ಲಿ ಉದ್ಯೋಗದ ಅವಧಿಯ ಮಾಹಿತಿ ಇರುತ್ತದೆ. ‘ಬಿ’ ವಿಭಾಗ ಬಹಳ ಮುಖ್ಯವಾದುದು. ಅದರಲ್ಲಿ  ವೇತನದ ವಿವರವಾದ ಬಿಡಿ ಬಿಡಿ ವಿವರಗಳು ಇರುತ್ತವೆ. ಕೆಲವು ಹೂಡಿಕೆಗಳು ಮತ್ತು ವೆಚ್ಚಗಳ ರೂಪದಲ್ಲಿ ನೀವು ಕ್ಲೇಮು ಮಾಡಿಕೊಂಡಂತಹ ತೆರಿಗೆ ಉಳಿತಾಯದ ಕಡಿತಗಳ ಮಾಹಿತಿ ಅಲ್ಲಿರುತ್ತದೆ.

ಉದ್ಯೋಗಿಗಳಿಗೆ ‘ಫಾರಂ 16’  ನೀಡುವುದು   ಉದ್ಯೋಗದಾತರ ಕರ್ತವ್ಯ. ಯಾಕೆಂದರೆ  ನೌಕರರ ಆದಾಯದ ಮೂಲದಲ್ಲಿ ತೆರಿಗೆ ಕಡಿತ ಮಾಡಿಕೊಂಡಿರುವವರು ಉದ್ಯೋಗದಾತರು. ಯಾರೇ ಆಗಲಿ ‘ಫಾರಂ 16’  ಪಡೆದಿಲ್ಲವೆಂದಾದರೆ  ಉದ್ಯೋಗದಾತರಲ್ಲಿ ಕೇಳಿ ಅದನ್ನು ಪಡೆದುಕೊಳ್ಳಬೇಕು. ಇದು ಆನ್‌ಲೈನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳದಂತಹ ದಾಖಲೆ.

‘ಫಾರಂ 16’  ಬಳಸಿ ಇ–ಫೈಲಿಂಗ್ ಮಾಡಿ
ಆದಾಯ ತೆರಿಗೆ ಇಲಾಖೆಯ ಅಂತರ್ಜಾಲ ತಾಣದಲ್ಲಿ ‘ಫಾರಂ 16’ ರಲ್ಲಿ ನೀಡಿದ ಮಾಹಿತಿ ಆಧಾರದಲ್ಲಿ ತೆರಿಗೆ ರಿಟರ್ನ್ಸ್‌ಗಳನ್ನು ‘ಇ–ಫೈಲ್‌’ ಮಾಡಬಹುದು. ಸಂಬಂಧಪಟ್ಟ ವಿಭಾಗಗಳಲ್ಲಿ ಉದ್ಯೋಗಿಯೆ ಕೈಯಾರೆ ಮಾಹಿತಿಗಳನ್ನು ತುಂಬಬೇಕು.

‘ಕ್ಲಿಯರ್‌ ಟ್ಯಾಕ್ಸ್‌’ನಂತಹ ಖಾಸಗಿ ತೆರಿಗೆ ಫೈಲಿಂಗ್‌ ವೇದಿಕೆಗಳಲ್ಲಿ ‘ಫಾರಂ 16’  ಅನ್ನು ಅಪ್‌ಲೋಡ್ ಮಾಡಿದರೆ ಮುಗಿಯಿತು. ವೆಬ್‌ಸೈಟ್‌ ಸ್ವಯಂಚಾಲಿತವಾಗಿ ರಿಟರ್ನ್‌ಗಳನ್ನು ತಯಾರಿಸಿಕೊಡುತ್ತದೆ. ತೆರಿಗೆಗೆ ಸಂಬಂಧಿಸಿದಂತೆ ನಿಮ್ಮಲ್ಲಿ ಎಲ್ಲ ಮಾಹಿತಿಗಳೂ ಇವೆ ಎಂದಾದರೆ ‘ಫಾರಂ 16’  ಇಲ್ಲದೆ ಇದ್ದರೂ ‘ಇ – ಫೈಲ್’ ಮಾಡಬಹುದು.

ಇತರ ಫಾರಂ 16:
‘ಫಾರಂ 16ಎ’ ನಂತಹ ಇತರ ದಾಖಲೆಯೂ ಇದೆ. ‘ಫಾರಂ 16’ ರಲ್ಲಿ ವೇತನದ ವಿವರ ಇದ್ದರೆ, ‘ಫಾರಂ 16 ಎನಲ್ಲಿ ಇತರ ಆದಾಯಗಳ ಮೂಲದಿಂದ ತೆರಿಗೆ ಕಡಿತಗೊಂಡಿರುವ ವಿವರ ಇರುತ್ತದೆ. ಬ್ಯಾಂಕ್‌ಗಳಲ್ಲಿನ ನಿಶ್ಚಿತ ಠೇವಣಿ, ವಿಮೆ ಕಮಿಷನ್‌, ಮನೆ ಆಸ್ತಿಗಳಂತಹ ಆದಾಯಗಳು ಈ ‘ಫಾರಂ 16 ಎ’ನಲ್ಲಿ ಸೇರುತ್ತದೆ.

‘ಫಾರಂ 16ಎ’ ಅನ್ನು ತೆರಿಗೆ ಮುರಿದುಕೊಳ್ಳುವವರು ನೀಡುತ್ತಾರೆ. ಇಂತಹ ತೆರಿಗೆ ಮುರಿದುಕೊಳ್ಳುವವರು ಹಲವು ಮಂದಿ ಇರಬಹುದು. ಉದಾಹರಣೆಗೆ,  ಯಾರಾದರು ಎರಡು ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ಹೊಂದಿದ್ದರೆ ಮತ್ತು ಈ ಎರಡೂ ಕಡೆಗಳಲ್ಲಿ ಟಿಡಿಎಸ್‌ ಕಡಿತಗೊಳ್ಳುತ್ತಿದ್ದರೆ, ಎರಡೂ ಬ್ಯಾಂಕ್‌ಗಳು ‘ಫಾರಂ 16ಎ’ ಗಳನ್ನು ಪ್ರತ್ಯೇಕವಾಗಿ ನೀಡುತ್ತವೆ.

‘ಫಾರಂ 16’  ಎಂಬುದು ತೆರಿಗೆ ಲೆಕ್ಕಪತ್ರ ಪಾವತಿ ಮಾಡುವಾಗ ಇರುವಂತಹ ಅವಿಭಾಜ್ಯ ದಾಖಲೆ. ಟಿಡಿಎಸ್‌ ಮುರಿದುಕೊಂಡ ಬಳಿಕವೂ  ಉದ್ಯೋಗದಾತರು ‘ಫಾರಂ 16’  ನೀಡದೆ ಇದ್ದರೂ ನೀವು ರಿಟರ್ನ್ ಸಲ್ಲಿಸಲೇಬೇಕು.

‘ಫಾರಂ 16’  ಕೊಡದೆ ಇರುವುದು ಉದ್ಯೋಗದಾತರ ತಪ್ಪು ಮತ್ತು ಅದಕ್ಕೆ ದಂಡವನ್ನೂ ಪಾವತಿಸಬೇಕಾಗುತ್ತದೆ. ತೆರಿಗೆ ಆದಾಯ ಮಿತಿಗಿಂತ ಹೆಚ್ಚಿನ ಆದಾಯವನ್ನು ನೀವು ಗಳಿಸುತ್ತಿದ್ದರೆ ತೆರಿಗೆ ರಿಟರ್ನ್ಸ್‌ ಸಲ್ಲಿಸುವುದು ನಿಮ್ಮ ಹೊಣೆಗಾರಿಕೆ ಹಾಗೂ ‘ಫಾರಂ 16’ ನಿಮ್ಮ ಈ ಕೆಲಸವನ್ನು ಸುಲಭಗೊಳಿಸುತ್ತದೆ.

ಮಾಹಿತಿ ಮುಚ್ಚಿಡುವಂತಿಲ್ಲ
ದೇಶದ ಜನಸಂಖ್ಯೆಯಲ್ಲಿ ಸುಮಾರು ಶೇ 4ರಷ್ಟು ಮಂದಿ ಮಾತ್ರ ತೆರಿಗೆ ಪಾವತಿಸುತ್ತಾರೆ ಹಾಗೂ ಅದಕ್ಕಿಂತಲೂ ಕಡಿಮೆ ಮಂದಿ ತೆರಿಗೆ ರಿಟರ್ನ್ಸ್‌  ಸಲ್ಲಿಸುತ್ತಾರೆ. ಎಲ್ಲ ತೆರಿಗೆ ಪಾವತಿಸಿ ಆಗಿದೆ, ತೆರಿಗೆ ರಿಟರ್ನ್ಸ್‌ ಸಲ್ಲಿಸಿದ್ದೇ ಆದರೆ ಇನ್ನಷ್ಟು ತೆರಿಗೆಗೆ ಬೇಡಿಕೆ ಬರಬಹುದು ಅಥವಾ ಲೆಕ್ಕಪರಿಶೋಧನೆ ನಡೆಯಬಹುದು ಎಂದೇ  ರಿಟನ್ಸ್‌ ಫೈಲ್‌ ಮಾಡದ ಅನೇಕರು ಭಾವಿಸುತ್ತಾರೆ.

ಎಲ್ಲಾ ಸಂದರ್ಭಗಳಲ್ಲೂ ಇದು ಸತ್ಯವಲ್ಲ.  ತೆರಿಗೆ ರಿಟರ್ನ್ಸ್‌ಗಳನ್ನು ಸರಿಯಾಗಿ ಸಲ್ಲಿಸಲಾಗಿದೆಯೇ ಎಂದು ಪರಿಶೀಲಿಸುವ ಅಗತ್ಯ ಇದ್ದೇ ಇದೆ. ತೆರಿಗೆ ರಿಟರ್ನ್ಸ್‌ ಸಲ್ಲಿಸುವಾಗ ಸ್ವಲ್ಪ ಎಚ್ಚರ ವಹಿಸಿದರೆ ಮುಂದೆ ತೆರಿಗೆ ಪಾವತಿಸಲು ಬೇಡಿಕೆ ಬರುವುದು ಅಥವಾ ನೋಟಿಸ್‌ ಪಡೆದುಕೊಳ್ಳುವ ಪ್ರಮೇಯದಿಂದ ಪಾರಾಗಬಹುದು.

‘ಫಾರಂ 26ಎಎಸ್‌’  ವ್ಯಕ್ತಿಯ ಆದಾಯದ ಮೂಲದಿಂದ ತೆರಿಗೆ ಕಡಿತ ಮಾಡಿಕೊಂಡಿದ್ದನ್ನು ತಿಳಿಸುವ ಸಂಪೂರ್ಣ ಮಾಹಿತಿ ಕಣಜವಾಗಿರುತ್ತದೆ. ಅದರಲ್ಲಿ ಅಡ್ವಾನ್‌್ಸ ಟ್ಯಾಕ್ಸ್ ಅಥವಾ ಸ್ವಯಂಘೋಷಿತ ತೆರಿಗೆಗಳಂತಹ ತೆರಿಗೆಗಳೂ ಸೇರಿಕೊಂಡಿರುತ್ತವೆ. ತೆರಿಗೆ ಕಡಿತ ಮಾಡಿದ್ದಕ್ಕೆ ಪ್ರತಿಯಾಗಿ   ನೀಡಿದಂತಹ ಆದಾಯದ ಮಾಹಿತಿಯೂ ಅದರಲ್ಲಿ ಇರುತ್ತದೆ. ‘ಫಾರಂ 26ಎಎಸ್‌’ನಲ್ಲಿನ ಮಾಹಿತಿಗೂ, ತೆರಿಗೆ ರಿಟರ್ನ್ಸ್‌ಗೂ ಹೊಂದಾಣಿಕೆ ಆಗದಿದ್ದರೆ ನೋಟಿಸ್‌
ಜಾರಿಗೊಳ್ಳುವ ಸಾಧ್ಯತೆಯೂ ಇರುತ್ತದೆ.

ತೆರಿಗೆ ರಿಟರ್ನ್ಸ್‌ ಸಲ್ಲಿಕೆಗೆ ಸೂಕ್ತ ರೀತಿಯ ಫಾರಂ ಬಳಸುವುದು ಬಹಳ ಮುಖ್ಯ.  ವೇತನ, ಒಂದು ಮನೆಯ ಆಸ್ತಿ ಮತ್ತು ಇತರ ಆದಾಯ ಮೂಲಗಳಿದ್ದರೆ ‘ಐಟಿಆರ್‌–1’ ಅನ್ನು ಬಳಸಬೇಕು.   ಒಂದಕ್ಕಿಂತ ಅಧಿಕ ಮನೆಗಳಿಂದ ಆದಾಯ ಬರುತ್ತಿದ್ದರೆ ಅಥವಾ ನಷ್ಟಗಳೇನಾದರೂ ಇದ್ದರೆ ‘ಐಟಿಆರ್‌–2ಎ’ ಬಳಸಬೇಕು. ಬಂಡವಾಳ ಗಳಿಕೆ ಲಾಭ (ಕ್ಯಾಪಿಟಲ್‌ ಗೇನ್‌) ಇದ್ದಲ್ಲಿ, ವಿದೇಶದಲ್ಲಿ ಆಸ್ತಿ ಹೊಂದಿದ್ದರೆ ಅಥವಾ ತೆರಿಗೆ ಒಪ್ಪಂದದಂತೆ ಪರಿಹಾರ ಪಡೆದುಕೊಳ್ಳುವುದೇನಾದರೂ ಇದ್ದಲ್ಲಿ ‘ಐಟಿಆರ್‌–2’ ಅನ್ನು ಸಲ್ಲಿಸಬೇಕಾಗುತ್ತದೆ.

ತೆರಿಗೆ ರಿಟರ್ನ್ಸ್‌ ಫಾರಂನಲ್ಲಿ ಈ ವರ್ಷ ಸೇರ್ಪಡಗೊಂಡಿರುವ ಹೊಸ ವಿಷಯವೇನೆಂದರೆ, ಒಟ್ಟು ಆದಾಯ ₹ 50 ಲಕ್ಷಕ್ಕಿಂತ ಅಧಿಕ ಇದ್ದರೆ, ಭಾರತದಲ್ಲಿ  ಹೊಂದಿರುವ ಆಸ್ತಿಗಳು ಮತ್ತು ಸಾಲಗಳ ಬಗ್ಗೆ ಹಣಕಾಸು ವರ್ಷದ ಕೊನೆಯಲ್ಲಿ ಕಡ್ಡಾಯವಾಗಿ ಮಾಹಿತಿ ನೀಡಬೇಕಿರುವುದು. ಹೀಗೆ ಮಾಹಿತಿ ನೀಡುವಲ್ಲಿ ಈ ಕೆಳಗಿನ ವಿಚಾರಗಳನ್ನು ನಮೂದಿಸಬೇಕಾಗುತ್ತದೆ.

ಹೊಂದಿರುವ ಜಮೀನು, ಕಟ್ಟಡ, ಆಭರಣ, ಚಿನ್ನ, ವಾಹನಗಳು, ದೋಣಿ, ವಿಮಾನಗಳ ಮಾಹಿತಿ ನೀಡಬೇಕು. ಇಂತಹ ಆಸ್ತಿಗಳನ್ನು ಉಡುಗೊರೆ ರೂಪದಲ್ಲಿ ಅಥವಾ ಹಿರಿಯರಿಂದ ಬಳುವಳಿಯಾಗಿ ಬಂದಿದ್ದರೆ, ಈ ಹಿಂದಿನ ಮಾಲೀಕರು ಭರಿಸಿದಂತಹ ವೆಚ್ಚದ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯ.

ವಿದೇಶದಲ್ಲಿ ಬ್ಯಾಂಕ್‌ ಖಾತೆಗಳಂತಹ ಆಸ್ತಿಗಳು ಇದ್ದರೆ, ಅಂತಹ ಖಾತೆಗಳಲ್ಲಿ ವ್ಯವಹಾರ ಇಲ್ಲದಿದ್ದರೂ ತೆರಿಗೆ ರಿಟರ್ನ್ಸ್‌ನಲ್ಲಿ ಅದರ ವಿವರ ನೀಡಲೇಬೇಕು.ಉದ್ಯೋಗದಾತರ ವಿದೇಶಿ ಮಾತೃ ಸಂಸ್ಥೆಯಿಂದ ಷೇರುಗಳನ್ನು ಪಡೆದಿದ್ದರೆ ಸಹ ಅದನ್ನು ರಿಟರ್ನ್ಸ್‌ನಲ್ಲಿ ತೋರಿಸಬೇಕಾಗುತ್ತದೆ.

ಕಳೆದ ವರ್ಷದಿಂದೀಚೆಗೆ ಎಲ್ಲ ಉಳಿತಾಯ ಮತ್ತು ಚಾಲ್ತಿ ಬ್ಯಾಂಕ್‌ ಖಾತೆಗಳು, ಆ ವರ್ಷ ಕೊನೆಗೊಳಿಸಿದಂತಹ ಖಾತೆಗಳ ವಿವರಗಳನ್ನು ನೀಡಬೇಕಾಗುತ್ತದೆ. ಅದಕ್ಕಿಂತ ಮೊದಲು ತೆರಿಗೆ ಹಣ ವಾಪಸ್‌ ಪಡೆದುಕೊಳ್ಳಲು ಒಂದು ಬ್ಯಾಂಕ್‌ ಖಾತೆಯ ವಿವರ ನೀಡಿದ್ದರೆ ಸಾಕಾಗುತ್ತಿತ್ತು. ನಿಮ್ಮ ಉಳಿತಾಯ ಬ್ಯಾಂಕ್‌ ಖಾತೆಗೆ ಬರುವಂತಹ ಬಡ್ಡಿಯ ವಿವರವನ್ನೂ ನೀಡುವುದಕ್ಕೆ ಮರೆಯಬೇಡಿ. ಈ ಬಡ್ಡಿಗೆ ₹ 10 ಸಾವಿರದ ತನಕ ತೆರಿಗೆ ಕಡಿತದ ಅವಕಾಶ ಇದೆ.

‘ಇ–ಫೈಲಿಂಗ್‌’ ನಂತರ ರಿಟರ್ನ್ಸ್‌ ಅನ್ನು ಡಿಜಿಟಲ್‌ ರೂಪದಲ್ಲಿ ಸಹಿ ಮಾಡದೆ ಇದ್ದಲ್ಲಿ, ನಿಮ್ಮ ತೆರಿಗೆ ರಿಟರ್ನ್ಸ್‌ ಬಗ್ಗೆ 120 ದಿನದೊಳಗೆ ಪರಿಶೀಲನೆ ನಡೆಸಬೇಕು. ಅದಕ್ಕಾಗಿ ಸಹಿ ಮಾಡಿದಂತಹ ಐಟಿಆರ್‌–5 ಅನ್ನು ಆದಾಯ ತೆರಿಗೆ ಇಲಾಖೆಯ ಕೇಂದ್ರೀಕೃತ ನಿರ್ವಹಣಾ ಕೇಂದ್ರಕ್ಕೆ ಕಳುಹಿಸಬೇಕು ಅಥವಾ ಎಲೆಕ್ಟ್ರಾನಿಕ್‌ ವೆರಿಫಿಕೇಷನ್‌ ಕೋಡ್‌ನ   ಆನ್‌ಲೈನ್‌ ವೆಲಿಡೇಷನ್ ಗಮನಿಸಬೇಕು.

ಈ ರೀತಿ ಮಾಡದೆ ಇದ್ದಲ್ಲಿ ನಿಮ್ಮ ತೆರಿಗೆ ರಿಟರ್ನ್ಸ್‌ ಸಂಸ್ಕರಣೆ ನಡೆದಿಲ್ಲ ಮತ್ತು ನೀವು ಸಲ್ಲಿಸಿದ ರಿಟರ್ನ್ಸ್‌ ಅಸಮರ್ಪಕ ಎನಿಸುತ್ತದೆ. ತೆರಿಗೆ ರಿಟರ್ನ್ಸ್‌ ಗೆ ಸಂಬಂಧಿಸಿದಂತೆ ಹೀಗೆ ಮಾಡಬೇಕು, ಹೀಗೆ ಮಾಡಬಾರದು ಎಂಬ ದೊಡ್ಡ ಪಟ್ಟಿಯೇ ಇದೆ. ಇಲ್ಲಿ ತಿಳಿಸಿದ ವಿಚಾರಗಳನ್ನು ಅನುಸರಿಸಿದ್ದೇ ಆದಲ್ಲಿ ರಿಟರ್ನ್ಸ್‌ ಸಲ್ಲಿಕೆಯ ತಪ್ಪುಗಳನ್ನು ಮತ್ತು ಅದಕ್ಕಾಗಿ ನೋಟಿಸ್‌ ಪಡೆಯುವುದನ್ನು ತಪ್ಪಿಸಬಹುದು.

(ಅಜಿತ್‌– ಕ್ಲಿಯರ್‌ ಟ್ಯಾಕ್‌್ಸ ಸಂಸ್ಥೆಯ  ಸಂಸ್ಥಾಪಕ ಮತ್ತು ಸಿಇಒ) (ಆನಂದ್‌ ಧೆಲಿಯಾ–ಪೀಪಲ್‌ ಅಡ್ವೈಸರಿ ಸರ್ವೀಸಸ್‌ನ ತೆರಿಗೆ ನಿರ್ದೇಶಕ. ಹಿರಿಯ ತೆರಿಗೆ ತಜ್ಞ ಅಮ್ನು ಸದಾನಂದನ್‌ ಸಹ ಪೂರಕ ಮಾಹಿತಿ ನೀಡಿದ್ದಾರೆ)

Leave a comment