ಪಾಕೆಟ್ ಸ್ಕ್ಯಾನರ್ ಜೇಬಲ್ಲೇ ಒಯ್ಯಬಹುದಾದ ಸಾಧನ.

ಪಾಕೆಟ್ ಸ್ಕ್ಯಾನರ್ ಜೇಬಲ್ಲೇ ಒಯ್ಯಬಹುದಾದ ಸಾಧನ

ಕಿರಣ್ ಇಜಿಮಾನ್, ಬೆಂಗಳೂರು
ಇದು ಮಾಹಿತಿ ಯುಗ, ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕೆಲಸಕ್ಕೆ ಮತದಾರರ ಗುರುತು ಕಾರ್ಡ್, ಆಧಾರ್ ಕಾರ್ಡ್, ವಿದ್ಯಾಭ್ಯಾಸದ ಪ್ರಮಾಣ ಪತ್ರಗಳು, ವಿವಿಧ ಸರ್ಟಿಫಿಕೇಟ್​ಗಳು ಎಂದೆಲ್ಲ ವಿವಿಧ ಕಡತಗಳು, ಪತ್ರಗಳು ಬೇಕಾಗುತ್ತವೆ. ಅವೆಲ್ಲವನ್ನೂ ಎಲ್ಲೆಡೆಗೂ ಒಯ್ಯುವುದು ಕಷ್ಟ. ಇತ್ತೀಚೆಗೆ ಎಲ್ಲ ವಿಧದ ಕೆಲಸ ಕಾರ್ಯಕ್ಕೆ ಆನ್​ಲೈನ್ ಅರ್ಜಿ ಸಹ ಬೇಕಾಗುತ್ತದೆ. ಅದಕ್ಕೆ ನಾವು ಹಲವು ಐಡಿ ಕಾರ್ಡ್​ಗಳು, ಫೋಟೋ, ಸರ್ಟಿಫಿಕೇಟ್ ಎಂದೆಲ್ಲ ಲಗತ್ತಿಸಬೇಕಾಗುತ್ತದೆ, ಅವುಗಳನ್ನು ಸ್ಕ್ಯಾನ್ ಮಾಡಿ ಜೆಪೆಗ್ ಫಾರ್ಮಟ್​ಗೆ ಪರಿವರ್ತಿಸಿ ಅಪ್​ಲೋಡ್ ಮಾಡಬೇಕಿರುತ್ತದೆ. ಆನ್​ಲೈನ್​ನಲ್ಲೂ ಸಾಫ್ಟ್​ಕಾಪಿಗಳನ್ನು ಹೊಂದಿರುವುದು ಅಗತ್ಯವಾಗಿರುತ್ತದೆ. ಇಂಥ ಸಂದರ್ಭದಲ್ಲಿ ನಾವು ಸ್ಕ್ಯಾನರ್​ಗಳನ್ನು ಅವಲಂಬಿಸುವುದು ಅನಿವಾರ್ಯ. ಕೆಲವೊಮ್ಮೆ ನಮಗೆ ಬೇಕಾದಾಗ ಮತ್ತು ಬೇಕಿರುವ ಸ್ಥಳದಲ್ಲಿ ಸ್ಕ್ಯಾನರ್ ಸೌಲಭ್ಯ ದೊರೆಯದೆ ಪರದಾಡಬೇಕಾಗುತ್ತದೆ.

ಇಂಥ ಸಂದರ್ಭದಲ್ಲಿ ಸರಳ ಉಪಾಯದ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಇದಕ್ಕೆ ಮಾಡಬೇಕಾಗಿರುವುದಿಷ್ಟೆ, ಸ್ಮಾರ್ಟ್​ಫೋನ್​ನಲ್ಲಿ ಡ್ಯಾಕುಮೆಂಟ್-ಫೋಟೋ ಸ್ಕ್ಯಾನರ್ ಆಪ್ ಹಾಕಿಕೊಂಡರೆ ಸಾಕು. ಪ್ಲೇಸ್ಟೋರ್, ಆಪ್ ಸ್ಟೋರ್​ನಲ್ಲಿ ಉಚಿತವಾಗಿ ದೊರೆಯುವ ಕೆಲವು ಡ್ಯಾಕುಮೆಂಟ್ ಸ್ಕ್ಯಾನರ್​ಗಳ ಪರಿಚಯ ಇಲ್ಲಿದೆ. ಇವುಗಳ ಮೂಲಕ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಿ, ಕಳುಹಿಸುವುದು, ಅಟ್ಯಾಚ್ ಮಾಡುವುದು ತೀರಾ ಸರಳ. ಅಗತ್ಯದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸ್ಮಾರ್ಟ್​ಫೋನ್​ನಲ್ಲಿ ಇಟ್ಟುಕೊಳ್ಳುವುದೂ ಪ್ರಯೋಜನಕಾರಿ.

ಆಫೀಸ್ ಲೆನ್ಸ್:

ಆಂಡ್ರಾಯ್್ಡ ಐಒಎಸ್ ಮತ್ತು ವಿಂಡೋಸ್​ಗೆ ಲಭ್ಯ
ಮೈಕ್ರೋಸಾಫ್ಟ್ ಅಭಿವೃದ್ಧಿಪಡಿಸಿರುವ ಈ ಆಪ್ ಸರಳವಾಗಿ ಸ್ಕ್ಯಾನ್ ಅಗತ್ಯಗಳನ್ನು ಪೂರೈಸುತ್ತದೆ. ಫೋಟೋ, ಸರ್ಟಿಫಿಕೇಟ್ ಸ್ಕ್ಯಾನ್ ಮಾಡುತ್ತಿದ್ದಂತೆ ಅದನ್ನು ಬೇಕಾದಷ್ಟು ಕ್ರಾಪ್ ಮಾಡುತ್ತದೆ, ಅಗತ್ಯವಿಲ್ಲದ ಸ್ಥಳವನ್ನು ಕ್ಲೀನ್ ಮಾಡಿ, ನೀಟಾದ ಫೈಲ್ ಸಿದ್ಧಪಡಿಸುತ್ತದೆ. ನಂತರ ಅದನ್ನು ನೀವು ಬಯಸಿದ ರೀತಿ ಜೆಪೆಗ್, ಎಂಎಸ್ ವರ್ಡ್, ಪವರ್​ಪಾಯಿಂಟ್ ಅಥವಾ ಪಿಡಿಎಫ್​ಗೆ ಪರಿವರ್ತಿಸುತ್ತದೆ.

ಕ್ಯಾಮ್್ಕ್ಯಾನರ್:

ಆಂಡ್ರಾಯ್್ಡ ಐಒಎಸ್ ಮತ್ತು ವಿಂಡೋಸ್​ಗೆ ಲಭ್ಯ
ಜಗತ್ತಿನಾದ್ಯಂತ 10 ಕೋಟಿಗೂ ಹೆಚ್ಚು ಜನರು ಬಳಸುವ ಕ್ಯಾಮ್್ಕ್ಯಾನರ್ ಒಂದು ಉಚಿತ ಆಪ್. ಅತ್ಯಂತ ಜನಪ್ರಿಯವಾಗಿದೆ. ಸ್ಕ್ಯಾನ್, ಶೇರ್, ಸ್ಟೋರ್ ಮತ್ತು ಸಿಂಕ್ ಎಂಬೆಲ್ಲ ಹಲವು ಆಯ್ಕೆಗಳನ್ನು ನೀಡಿರುವ ಈ ಆಪ್ ಸ್ಮಾರ್ಟ್​ಫೋನ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್​ನಲ್ಲೂ ಬಳಕೆಯಾಗುತ್ತಿದೆ. ಸ್ಕ್ಯಾನ್ ಮಾಡಿದ ಫೈಲ್​ಗೆ ಬೇಕಾದಂತೆ ಎಡಿಟ್ ಮಾಡುವ ಆಯ್ಕೆ, ಅದಕ್ಕೆ ಅಗತ್ಯವಿದ್ದಲ್ಲಿ ಹೆಚ್ಚುವರಿ ಟೆಕ್ಸ್ಟ್, ಗ್ರಾಫಿಕ್ ಸೇರಿಸುವ ಸೌಲಭ್ಯವೂ ಕ್ಯಾಮ್್ಕ್ಯಾನರ್​ನಲ್ಲಿದೆ. ಫೈಲ್​ಗಳನ್ನು ಹಂಚಿಕೊಳ್ಳಲು ಹಲವು ಆಯ್ಕೆಗಳನ್ನು ಇದರಲ್ಲಿ ನೀಡಲಾಗಿದೆ.

ಫಾಸ್ಟ್ ಸ್ಕ್ಯಾನರ್:

ಆಂಡ್ರಾಯ್್ಡ ಮತ್ತು ಐಒಎಸ್​ಗೆ ಲಭ್ಯ
ಪುಸ್ತಕ, ಹಲವು ಪುಟ ಹೊಂದಿರುವ ಫೈಲ್​ನ್ನು ಸುಲಭವಾಗಿ ಈ ಅಪ್ ಸ್ಕ್ಯಾನ್ ಮಾಡುತ್ತದೆ. ಸ್ಪಷ್ಟ ಚಿತ್ರ ಸ್ಕ್ಯಾನ್ ಇದರ ವಿಶೇಷ, ಜೆಪೆಗ್, ಪಿಡಿಎಫ್ ಆಯ್ಕೆಯೂ ಇದೆ. ಹಲವು ಪುಟ ಹೊಂದಿದ್ದರೆ ಈ ಆಪ್ ನಿರಂತರ ಪ್ರತಿ ಪುಟವನ್ನೂ ವೇಗವಾಗಿ ಸ್ಕ್ಯಾನ್ ಮಾಡಿ ಒಂದೇ ಫೈಲ್ ಬೇಕಾದಲ್ಲಿ ಆಯ್ಕೆ ನೀಡುತ್ತದೆ.

ಎವರ್​ನೋಟ್ ಸ್ಕ್ಯಾನೇಬಲ್:

ಐಒಎಸ್​ಗೆ ಲಭ್ಯ
ಎವರ್​ನೋಟ್ ಆಭಿವೃದ್ಧಿಪಡಿಸಿರುವ ಈ ಆಪ್ ನೀವು ಬಯಸಿದಂತೆ ನಿಮ್ಮ ಫೈಲ್​ಗಳನ್ನು ಸ್ಕ್ಯಾನ್ ಮಾಡಲು ಸಹಕಾರಿ. ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ನೀಡುತ್ತದೆ ಈ ಅಪ್, ಆಪಲ್​ನ ಕ್ಯಾಮರಾ ಮೂಲಕ. ಡ್ಯಾಕುಮೆಂಟ್ ಮೇಲೆ ಫೋಕಸ್ ಮಾಡುತ್ತಿದ್ದಂತೆ ತಾನಾಗಿಯೇ ಈ ಆಪ್ ಸ್ಕ್ಯಾನ್ ಮುಗಿಸುತ್ತದೆ. ನಂತರ ಅದನ್ನು ಎಡಿಟ್ ಮಾಡಿ ಬೇಕಾದ ಫಾರ್ಮಟ್​ಗೆ ಪರಿವರ್ತಿಸಬಹುದು, ಜತೆಗೆ ಇ ಮೇಲ್ ಅಥವಾ ಎಸ್​ಎಂಎಸ್ ಮೂಲಕವೂ ಸ್ಕ್ಯಾನ್ ಮಾಡಿದ ಫೈಲ್ ಹಂಚಿಕೊಳ್ಳುವ ವ್ಯವಸ್ಥೆ ಇದೆ.

ಜೀನಿಯಸ್ ಸ್ಕ್ಯಾನ್:

ಆಂಡ್ರಾಯ್್ಡ ಐಒಎಸ್ ಮತ್ತು ವಿಂಡೋಸ್​ಗೆ ಲಭ್ಯ
ಜೀನಿಯಸ್ ಒಂದು ಉತ್ತಮ ಸ್ಕ್ಯಾನರ್ ಆಪ್ ಆಗಿದ್ದು, 15 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಹೊಂದಿದೆ. ಜೀನಿಯಸ್ ಆಪನ್ನು ಗ್ರಿಝ್ಜಿ ಲ್ಯಾಬ್ಸ್ ಅಭಿವೃದ್ಧಿಪಡಿಸಿದೆ. ಎಲ್ಲ ವಿಧದ ಫೋಟೋ, ಡಾಕ್ಯುಮೆಂಟ್​ಗಳನ್ನು ಈ ಆಪ್ ಸ್ಕ್ಯಾನ್ ಮಾಡುತ್ತದೆ. ನಂತರ ಬೇಕಾದಂತೆ ಜೆಪೆಗ್ ಅಥವಾ ಪಿಡಿಎಫ್ ತಯಾರಿಸಲು ನೆರವಾಗುತ್ತದೆ. ಸ್ಕ್ಯಾನ್ ಮಾಡಿದ ಫೈಲ್​ಗಳನ್ನು ಹಂಚಿಕೊಳ್ಳುವುದು ಕೂಡಾ ತೀರಾ ಸುಲಭ. ಸ್ಕ್ಯಾನ್ ಮಾಡಿದ ಫೈಲ್​ನ್ನು ಕಪ್ಪು-ಬಿಳುಪು ಆಗಿ ಕೂಡಾ ಪರಿವರ್ತಿಸುತ್ತದೆ.

ಈ ಆಯ್ಕೆ ಕೆಲವು ಸಂದರ್ಭದಲ್ಲಿ ಪ್ರಯೋಜನಕಾರಿ. ಜತೆಗೆ ಬೇಸಿಕ್ ಎಡಿಟಿಂಗ್ ಆಯ್ಕೆ ಕೂಡಾ ಲಭ್ಯ.

ಕಾಗೋ ಕಳ್ಳಸಾಗಣೆ ಪತ್ತೆಗೂ ಸ್ಕ್ಯಾನರ್:
ಅಂತಾರಾಷ್ಟ್ರೀಯ ಕಾಗೋ ಶಿಪ್​ಗಳು ನೂರಾರು ಬೃಹತ್ ಕಂಟೇನರ್​ಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಪ್ರತಿಯೊಂದನ್ನು ಶೋಧಿಸುವುದು, ಪತ್ತೆ ಹಚ್ಚುವುದು ಸುಲಭವಲ್ಲ. ಇದರಿಂದಾಗಿ, ಕಂಟೇನರ್ ಮೂಲಕ ಸುಲಭವಾಗಿ ಮೌಲ್ಯಯುತ ವಸ್ತುಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಲಂಡನ್​ನ ಯುನಿವರ್ಸಿಟಿ ಕಾಲೇಜ್​ನ ಕಂಪ್ಯೂಟರ್ ಸೈನ್ಸ್ ವಿಭಾಗದವರು ಇದಕ್ಕೊಂದು ಪರಿಹಾರ ಕಂಡುಹಿಡಿದಿದ್ದಾರೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸುವ ಎಕ್ಸ್ ರೇ ಕಿರಣದ ಪರೀಕ್ಷೆಯನ್ನು ಕಂಟೇನರ್ ಸ್ಕ್ಯಾನ್​ಗೆ ಬಳಸಿ ಯಶಸ್ವಿಯಾಗಿದ್ದಾರೆ. ಕಂಟೇನರ್ ಮೂಲಕ ಇದನ್ನು ಹಾಯಿಸಿ ಪರೀಕ್ಷಿಸಿದಾಗ ಸ್ಕ್ಯಾನರ್​ನಲ್ಲಿ ಕಂಟೇನರ್ ಒಳಗೇನಿದೆ ಎಂಬ ಮಾಹಿತಿ ಮತ್ತು ಚಿತ್ರ ಸ್ಕ್ರೀನ್​ನಲ್ಲಿ ಮೂಡುತ್ತದೆ. ಮುಖ್ಯವಾಗಿ ಕಾರುಗಳನ್ನು ಕಂಟೇನರ್ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದು, ಇದರ ಪತ್ತೆಯಲ್ಲಿ ಈ ಸ್ಕ್ಯಾನರ್​ಗಳು ಶೇ. 100 ಯಶಸ್ವಿಯಾಗಿವೆ. ಈ ರೀತಿಯ ಸಂಶಯಾತ್ಮಕ ವಸ್ತುಗಳು ಕಾಗೋದಲ್ಲಿ ಪತ್ತೆಯಾದಾಗ ಸ್ಕ್ಯಾನರ್ ಅಲರ್ಟ್ ನೀಡುತ್ತದೆ. ಈ ಪರೀಕ್ಷೆಯನ್ನು ಸಣ್ಣ ಪ್ರಮಾಣದಲ್ಲಿ ಮೆಟ್ರೋ, ವಿಮಾನ ನಿಲ್ದಾಣದಲ್ಲಿ ಬ್ಯಾಗೇಜ್ ಸ್ಕ್ಯಾನರ್​ಗೆ ಬಳಸುತ್ತಿದ್ದರೂ ಇದೀಗ ಕಾಗೋ ಕಂಟೇನರ್​ನಲ್ಲಿ ಬಳಸಿರುವುದರಿಂದ ಕಳ್ಳಸಾಗಣೆ ಪತ್ತೆ ಸುಲಭವಾಗಲಿದೆ.

Leave a comment